ಚಂದ್ರವಳ್ಳಿ ನ್ಯೂಸ್, ವಾಷಿಂಗ್ಟನ್:
ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ಕ್ವಾಡ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಇಡೀ ಮಾನವೀಯತೆಗೆ ಬಹಳ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆ 2024ರಲ್ಲಿ ಪಾಲ್ಗೊಂಡು ಹಾಟ್ ಮೈಕ್ ನಲ್ಲಿ ಮಾತನಾಡಿದ ಅವರು, ನಾವು ಯಾರ ವಿರುದ್ಧವೂ ಅಲ್ಲ. ನಾವೆಲ್ಲರೂ ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಎಲ್ಲಾ ಸಮಸ್ಯೆಗಳ ಶಾಂತಿಯುತ ಪರಿಹಾರ ಬೆಂಬಲಿಸುತ್ತೇವೆ ಎಂದು ತಿಳಿಸಿದರು.
ಆರೋಗ್ಯ, ಭದ್ರತೆ, ನಿರ್ಣಾಯಕ ಉದಯೋನ್ಮುಖ ತಂತ್ರಜ್ಞಾನಗಳು, ಹವಾಮಾನ ಬದಲಾವಣೆ ಮತ್ತು ಸಾಮರ್ಥ್ಯ ನಿರ್ಮಾಣದಂತಹ ಕ್ಷೇತ್ರಗಳಲ್ಲಿ ಕ್ವಾಡ್ ದೇಶಗಳು ಅನೇಕ ಸಕಾರಾತ್ಮಕ ಮತ್ತು ಅಂತರ್ಗತ ಉಪಕ್ರಮಗಳನ್ನು ತೆಗೆದುಕೊಂಡಿವೆ ಎಂದು ಮೋದಿ ಶ್ಲಾಘೀಸಿದರು.
ಅಂತೆಯೇ 2025 ರಲ್ಲಿ ಭಾರತದಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸುವ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಇದೇ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತನಾಡಿ, ಚೀನಾ ದೇಶವು ಕ್ವಾಡ್ ಸದಸ್ಯ ರಾಷ್ಟ್ರಗಳನ್ನು ಪರೀಕ್ಷಿಸುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ದೇಶೀಯ ಆರ್ಥಿಕ ಸವಾಲುಗಳು ಹಾಗೂ ಪ್ರಕ್ಷುಬ್ಧತೆ ನಿಯಂತ್ರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಭಾವಿಸಿದ್ದೇವೆ ಎಂದು ತಿಳಿಸಿದರು.
ರಾಜತಾಂತ್ರಿಕ ಅವಕಾಶಗಳನ್ನೇ ಚೀನಾ ಅಧ್ಯಕ್ಷರು ಖರೀದಿಸಲು ನೋಡುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಅವರು ಆಕ್ರಮಣಕಾರಿಯಾಗಿ ಸಾಗುತ್ತಿದ್ದಾರೆ ಎಂದು ನನಗನಿಸುತ್ತಿದೆ ಎಂದು ಹೇಳಿದರು.
ಅಂತೆಯೇ ಆಕ್ರಮಣಕಾರಿಯಾಗಿ ನಡೆದುಕೊಳ್ಳುವುದು ಇಂಡೋ–ಪೆಸಿಫಿಕ್ಭಾಗದ ನಮ್ಮನ್ನೆಲ್ಲ ಆರ್ಥಿಕತೆ, ತಂತ್ರಜ್ಞಾನ ಸೇರಿದಂತೆ ವಿವಿಧ ರೀತಿಯಲ್ಲಿ ಪರೀಕ್ಷಿಸುತ್ತಿದೆ. ಅದೇ ವೇಳೆ, ತೀವ್ರ ಸ್ಪರ್ಧೆಗೆ ತೀವ್ರ ರಾಜತಾಂತ್ರಿಕತೆ ಅಗತ್ಯವಾಗುತ್ತದೆ ಎಂಬುದನ್ನು ನಂಬಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದರು.
ಅಮೆರಿಕದ ಡೆಲವೇರ್ ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಂಡು ಮಹತ್ವದ ವಿಷಯಗಳ ಕುರಿತು ಗಂಭೀರ ಚರ್ಚೆ ಮಾಡಿದ್ದಾರೆ.