ಚಂದ್ರವಳ್ಳಿ ನ್ಯೂಸ್, ಶಿಗ್ಗಾವ್:
ಸಿದ್ದರಾಮಯ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಆದರೆ ನಮ್ಮ ಸರ್ಕಾರ ಜಾರಿಗೆ ಬಂದ ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಲಕ್ಷಾಂತರ ತಾಯಂದಿರು ಗ್ಯಾರಂಟಿಗಳ ಅನುಕೂಲಗಳನ್ನು ಪ್ರತೀ ದಿನ ಪಡೆಯುತ್ತಿದ್ದಾರೆ. ಮೋದಿ ಅವರ ಸುಳ್ಳುಗಳು ಮಾತ್ರ ನಿಲ್ಲುತ್ತಲೇ ಇವೆ ಎಂದು ಮುಖ್ಯಮಂತ್ರಿ ಟೀಕಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ, “ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇಲ್ಲ” ಎಂದು ಯಡಿಯೂರಪ್ಪ ಹೇಳಿದ್ದರು.
ಹೋಗಲಿ ಬಸವರಾಜ ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇವರು ಯಾವ ಮುಖ ಇಟ್ಟುಕೊಂಡು ರೈತರ ಮತ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.