ಮಾಸಿಕ ಗಮಕ ; ಶ್ರೀ ರಾಮ ಪಟ್ಟಾಭಿಷೇಕಂ ಪ್ರಸಂಗ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ, ಸೆ,2,ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ  ಸವಿನೆನಪಿನಲ್ಲಿ ಜೆ ಸಿ ಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ದಿನಾಂಕ 31 -8 -2025 ಭಾನುವಾರ ಸಂಜೆ ಏರ್ಪಡಿಸಿದ್ದ 25ನೇ ಕಾರ್ಯಕ್ರಮವು ಕನ್ನಡದ ಮೇರು ಗಮಕಿಗಳಲ್ಲಿ ಒಬ್ಬರಾದ ಕುಮಾರವ್ಯಾಸ ಪ್ರಶಸ್ತಿ ವಿಜೇತೆ, ಕಲಾಶ್ರೀ ಗಂಗಮ್ಮ ಕೇಶವಮೂರ್ತಿ ಅವರ ವಾಚನ ಹಾಗೂ ಐ.ಟಿ. ತಂತ್ರಜ್ಞ ವಿದ್ವಾನ್ ಪ್ರಶಾಂತ ಅವಧಾನಿ ಅವರ ವ್ಯಾಖ್ಯಾನಗಳಿಂದಾಗಿ ವೈಶಿಷ್ಟ ಪೂರ್ಣವೆನಿಸಿತು.

 ಈ ಕಾರ್ಯಕ್ರಮದಲ್ಲಿ ಗಮಕ ಕಲಾವಿದರು ಆಯ್ದುಕೊಂಡದ್ದು ಮುದ್ದಣ ಮಹಾಕವಿಯ “ಶ್ರೀರಾಮ ಪಟ್ಟಾಭಿಷೇಕಂ” ಕಾವ್ಯದ ಶ್ರೀರಾಮ ಪಟ್ಟಾಭಿಷೇಕ ಎಂಬ ಪ್ರಸಂಗವನ್ನು ಗಂಗಮ್ಮ ಕೇಶವಮೂರ್ತಿ ಅವರು ತಮ್ಮ ಉಚ್ಛ ಕಂಠಶ್ರೀಯಲ್ಲಿ  ನಿರರ್ಗಳವಾಗಿ ಕಾವ್ಯದ ವಿವಿಧ ರಸಸಭಾವಗಳು ಉದ್ದೀಪನಗೊಳ್ಳುವಂತೆ

- Advertisement - 

ಹಾವ-ಭಾವಗಳ ಸಹಿತ ಸಂಗೀತದ ಘನ ರಾಗಗಳಾದ ಸಾಮ,ರೇವತಿ, ತಿಲ್ಲಾಂಗ್, ಸಾರಮತಿ, ತೋಡಿ, ಮೋಹನ ,ಖರಹರಪ್ರಿಯ ಖಮಾಚ್, ಧರ್ಮವತಿ, ಅಭೋಗಿ,ಸಿಂಧುಭೈರವಿ ಮೊದಲಾದವುಗಳಲ್ಲಿ ಕಾವ್ಯ ವಾಚನ ಮಾಡಿದ ಅಪರೂಪದ ಅನುಭವವಾಗಿತ್ತು. ಈ ವಾಚನಕ್ಕೆ ಯುವ ಎಂಜನಿಯರ್ ವಿದ್ವಾನ್ ಪ್ರಶಾಂತ ಅವಧಾನಿ ಅವರು ಕಾವ್ಯದ ಅಂತರಂಗವು ಸ್ಪುಟಗೊಳ್ಳುವಂತೆ ಸಮಕಾಲೀನ ವಿದ್ಯಮಾನಗಳನ್ನು ಉಲ್ಲೇಖಿಸುತ್ತಾ ವ್ಯಾಖ್ಯಾನ ಮಾಡಿದ  ರೀತಿ ಉದ್ಬೋಧಕವಾಗಿತ್ತು.

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕಿ ಚಂದ್ರಿಕಾ ಸುರೇಶ್ ಅವರು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಗಮಕ ಕಲೆಯ ಮಹತ್ವವನ್ನು ವರ್ಣಿಸಿ, ಈ ಕಲೆಯು ಉಳಿದು ಬೆಳೆಯುವುದು ಕನ್ನಡ ಭಾಷೆಯ ಹಿರಿಮೆ ಗರಿಮೆಗಳಿಗೆ ಅತ್ಯಾವಶ್ಯಕ ಎಂದರು.

- Advertisement - 

 ಕಲಾವಿದ ಕಲ್ಯಾಣ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಗಮಕಿ ಮೀನಾಕ್ಷಿಭಟ್ ಸ್ವಾಗತಿಸಿದರು. ವಿದ್ವಾನ್ ಅನಂತಕೃಷ್ಣ ಕಲಾವಿದರನ್ನು ಸಭೆಗೆ ಪರಿಚಯಿಸಿದರು ಕೆ.ಆರ್. ರಮಾದೇವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿ.ಎಲ್. ಉಮಾ ಕಾರ್ಯಕ್ರಮ ನಿರ್ವಹಿಸಿದರು. ಶಶಿಧರ್ ಶ್ಯಾನುಭೋಗ್  ವಂದನಾರ್ಪಣೆ ನೆರವೇರಿಸಿದರು.

ಮುಂದಿನ ಮಾಸಿಕ ಗಮಕ ಕಾರ್ಯಕ್ರಮವು ದಿನಾಂಕ 5-10-2025 ರ ಭಾನುವಾರ ಸಂಜೆ ಚಿತ್ರದುರ್ಗದ ಜೆಸಿಆರ್ ಗಣಪತಿ ದೇವಾಲಯದಲ್ಲಿ ನಡೆಲಿದ್ದು. ಸ್ಥಳೀಯ ಬ್ರಹ್ಮಚೈತನ್ಯ ಮಂಡಳಿಯ ಕಲಾವಿದರು  ಹರಿದಾಸ ಕೀರ್ತನೆಗಳ ಗಾಯನವನ್ನು ನಡೆಸಿಕೊಡಲಿರುವರು ಎಂದು ಸಂಘಟಕರು ತಿಳಿಸಿದ್ದಾರೆ.

 

 

 

 

Share This Article
error: Content is protected !!
";