ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ; ಮೊರಾರ್ಜಿ ಶಾಲೆ ಪ್ರಾಚಾರ್ಯ ವಜಾ

News Desk

 ಚಂದ್ರವಳ್ಳಿ ನ್ಯೂಸ್, ಬೀದರ್ :
ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜತೆಗೆ ಪ್ರಾಂಶುಪಾಲ, ಶಿಕ್ಷಕರು ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತಿ ಸಿಇಒ ಡಾ.ಗಿರೀಶ ಬದೋಲೆ ಮತ್ತು ಎಸ್ಪಿ ಪ್ರದೀಪ ಗುಂಟಿ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗ್ರಾಮದ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾಹಿತಿ ಕಲೆಹಾಕಿತು. ಶಾಲೆಯಲ್ಲಿ ಸರಿಯಾಗಿ ಪಾಠ ಬೋಧನೆ ನಡೆಯದಿರುವುದು ಮತ್ತು ಅನುಚಿತ ವರ್ತನೆ ಬಗ್ಗೆ ಆರೋಪ ಮಾಡಿದ ವಿದ್ಯಾರ್ಥಿನಿಯರ ಜತೆಗೆ ಡಿಸಿ ಶಿಲ್ಪಾ ಶರ್ಮಾ ಅವರು ಕೆಲಕಾಲ ಗೌಪ್ಯವಾಗಿ ಮಾತನಾಡಿ ಮಾಹಿತಿ ಪಡೆದುಕೊಂಡರು.

ನಂತರ ತರಗತಿ ಕೋಣೆಗಳಿಗೆ ಭೇಟಿ ನೀಡಿದ ಅವರು ವಿಜ್ಞಾನ ಸೂತ್ರಗಳು ಮತ್ತು ಇಂಗ್ಲಿಷ್ ಸಂಬಂಧಿತ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳಿಂದ ಸಮರ್ಪಕ ಉತ್ತರ ಬರದ ಹಿನ್ನೆಲೆಯಲ್ಲಿ ವಿಜ್ಞಾನ ಶಿಕ್ಷಕರ ವಿರುದ್ಧ ಅಸಮಾಧಾನ ಹೊರಹಾಕಿದರು. 

ಬಳಿಕ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ʼವಸತಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದ ಶಾಲೆಯ ಪ್ರಾಂಶುಪಾಲರನ್ನು ಸೇವೆಯಿಂದ ಬಿಡುಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಆದೇಶಿಸಿದ್ದಾರೆ. ನಾನು ವಿದ್ಯಾರ್ಥಿನಿಯರ ಜತೆಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದೇನೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದುʼ ಎಂದರು.

- Advertisement -  - Advertisement - 
Share This Article
error: Content is protected !!
";