ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಮುಖ್ಯಮಂತ್ರಿಗಳ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್, ಡಿಸಿಎಂ ಮನೆಯಲ್ಲಿ ನಾಟಿಕೋಳಿ ಸಾರ್ ಊಟ, ಡಿನ್ನರ್ ಮೀಟಿಂಗ್, ಅಧಿಕಾರ ಹಂಚಿಕೆ ಕುರಿತ ಹೇಳಿಕೆ, ಪ್ರತಿ ಹೇಳಿಕೆಗಳು ನಿರಂತರವಾಗಿ ನಡೆದು ಎಲ್ಲವೂ ಸರಿ ಆಯ್ತು ಎನ್ನುವ ಸಂದರ್ಭದಲ್ಲೇ ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷವು ಸಿಎಂ ಸಿದ್ದರಾಮಯ್ಯ ಬಣ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳಾಗಿ ಸ್ಪಷ್ಟವಾಗಿ ಇಬ್ಬಾಗವಾಗಿರುವಂತೆ ಕಾಣಿಸುತ್ತಿದ್ದು ರಾಜ್ಯ ರಾಜಕೀಯ ಬಿರುಸುಗೊಂಡಿದೆ. ಈ ಮೂಲಕ ಆಡಳಿತ ರೂಢ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ಕದನ ರೋಚಕ ಘಟ್ಟ ತಲುಪಿದೆ.
ಬೆಳಗಾವಿ ಅಧಿವೇಶನ ಸಂದರ್ಭವನ್ನು ಭರ್ಜರಿಯಾಗಿ ಬಳಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಂಡು ಶಕ್ತಿ ಪ್ರದರ್ಶನಕ್ಕಾಗಿ ಪ್ರತ್ಯೇಕ ಡಿನ್ನರ್ ಮೀಟಿಂಗ್ಗಳನ್ನು ಆಯೋಜಿಸುವ ಮೂಲಕ ಹೈಕಮಾಂಡ್ ಗೆ ಮತ್ತೊಂದು ಸಂದೇಶ ರವಾನೆ ಮಾಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನೀಡಿದ್ದ ಔತಣ ಕೂಟದ ವೇಳೆಯೇ ತಮಗೆ 100ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಆಪ್ತ ಶಾಸಕರ ಬಳಿ ಹೇಳಿ ಡಿನ್ನರ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದ ಶಾಸಕರಿಗೆ ಡಿಸಿಎಂ ಭರವಸೆ ನೀಡಿದ್ದು ಗುಟ್ಟಾಗಿ ಉಳಿದಿಲ್ಲ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ತೀರಲಿದ್ದಾರೆ ಎನ್ನುವುದನ್ನು ಅರಿತಿರುವ ಕೆಲ ಸಚಿವರು ಸ್ಥಾನ ಉಳಿಸಿಕೊಳ್ಳಲು ಮತ್ತು ತಾವು ಮಂತ್ರಿ ಆಗಬೇಕೆಂದು ಭವಿಷ್ಯದ ಲೆಕ್ಕಾಚಾರದಲ್ಲಿರುವ ಕೆಲ ಶಾಸಕರು ಡಿಸಿಎಂ ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸುವ ಮೂಲಕ ಶಾಸಕರ ಬೆಂಬಲ ನೂರರ ಗಡಿ ದಾಟಿದೆ ಎನ್ನಲಾಗಿದೆ.
ನೂರಕ್ಕೂ ಹೆಚ್ಚಿನ ಶಾಸಕರ ಬೆಂಬಲ ಇರುವುದನ್ನು ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರಿಗೂ ಮುಟ್ಟಿಸುವ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಅಧಿವೇಶನ ಮುಗಿದ ಕೂಡಲೇ ಡಿಸೆಂಬರ್ 20 ಮತ್ತು 21ರಂದು ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ನಾಯಕರ ಸಭೆಯಲ್ಲಿ ತಮ್ಮೊಂದಿಗೆ ಇರುವ ಶಾಸಕರ ಸಂಖ್ಯೆಯನ್ನು ಪ್ರಸ್ತುತಪಡಿಸುವ ತವಕದಲ್ಲಿ ಡಿ.ಕೆ. ಶಿವಕುಮಾರ್ ಇದ್ದು ಈ ಕಾರ್ಯವನ್ನು ಯಶಸ್ವಿಯಾಗಿ ರೂಪಿಸಿದ್ದಾರೆ.

