ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಲ್ಸನ್ ಗಾರ್ಡನ್ ಪ್ರದೇಶದ ಚಿನ್ನಯ್ಯನ ಪಾಳ್ಯದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಬಾಲಕನೊರ್ವ ಮೃತಪಟ್ಟು 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ನಿಗೂಢ ಸ್ಫೋಟಕ್ಕೆ ಸಿಲಿಕಾನ್ ಸಿಟಿ ಜನ ಬೆಚ್ಚಿಬಿದ್ದು ಸ್ಫೋಟದಲ್ಲಿ ಸುಮಾರು 8 ಮನೆಗಳಿಗೆ ಹಾನಿಯಾಗಿವೆ.
ನಿಗೂಢ ಸ್ಫೋಟದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಹಿರಂಗವಾಗಿದೆ.
ಸ್ಫೋಟದ ಭಾರೀ ಶಬ್ದಕ್ಕೆ ಎದ್ನೋ, ಬಿದ್ನೋ ಅಂತಾ ಜನರು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ. ಸ್ಫೋಟದಲ್ಲಿ ಮುಬಾರಕ್(8) ಮೃತಪಟ್ಟಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಮತ್ತಿತರರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಅಲ್ಲದೆ ಮೃತನ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಘೋಷಣೆ ಮಾಡಿ ಸ್ಫೋಟದಿಂದ ಹಾನಿಗೊಳಗಾದ ಮನೆಗಳನ್ನು ನಾವೇ ದುರಸ್ತಿ ಮಾಡಿಸಿಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿತಕರ ಘಟನೆ ನಡೆದಿದೆ. ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟದಂತೆ ಕಂಡುಬಂದಿದೆ. ಕಸ್ತೂರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದಾನೆ. 9 ಜನ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಸ್ಫೋಟದ ತೀವ್ರತೆಗೆ 13 ಮನೆಗಳಿಗೆ ಹಾನಿಯಾಗಿದ್ದು, ನಾವೇ ದುರಸ್ತಿ ಮಾಡಿಸಿಕೊಡುತ್ತೇವೆ. ಸಂಜಯ್ ಗಾಂಧಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ. ಮೂವರು ಗಾಯಾಳುಗಳ ಪೈಕಿ 60 ವರ್ಷದ ಸರಸಮ್ಮ ಸ್ಥಿತಿ ಗಂಭೀರವಾಗಿದೆ. ಪ್ರಮೀಳಾ(40) ಹಾಗೂ ರಾಜೇಶ್(38) ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸಿಎಂ ಮಾಹಿತಿ ನೀಡಿದರು.
ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಸ್ಫೋಟ ಘಟನೆ ಕುರಿತು ಹೇಳಿಕೆ ನೀಡಿ, ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಒಂದು ಮಗು ಮೃತಪಟ್ಟಿದೆ, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ತೀವ್ರತೆಗೆ 6 ರಿಂದ 7 ಮನೆಗಳಿಗೆ ಹಾನಿಯಾಗಿದೆ. 5 ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಫೋಟ ಯಾವ ರೀತಿಯಾಗಿದೆ ಅಂತಾ ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ. ಮನೆಗಳಿಗೆ ಹಾನಿಯಾಗಿರುವ ಬಗ್ಗೆ ತನಿಖೆ ನಡೆಸುತ್ತೇವೆ. ಸ್ಫೋಟವಾದಾಗ ತಾಯಿ ಮತ್ತು ಮಗು ಮಾತ್ರ ಇದ್ದರು. ಅವಶೇಷಗಳನ್ನು ಕ್ಲೀನ್ ಮಾಡಿದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

