ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾದ ತಕ್ಷಣವೇ ವೈದ್ಯಾಧಿಕಾರಿಗಳು ಹತ್ತಿರ ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾಧಿಕಾರಿ ಮಾಹಿತಿ ನೀಡಬೇಕು. ಈ ಮಾಹಿತಿ ಆಧರಿಸಿ ಪೊಲೀಸರು ಪೋಕ್ಸೋ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಎಫ್.ಐ.ಆರ್ ದಾಖಲಿಸಿ ವಿಚಾರಣೆ ನಡೆಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ತಾಕೀತು ಮಾಡಿದರು.
ಸೋಮವಾರ ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ನಂತರ, ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿತು, ಈ ವೇಳೆ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮೇಲಿನಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 2020 ರಿಂದ 2024ರ ಅವಧಿಯಲ್ಲಿ 8,093ಕ್ಕೂ ಅಧಿಕ ಬಾಲ ಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಈ ವರ್ಷ 341 ಬಾಲಗರ್ಭಿಣಿ ಪ್ರಕರಣ ವರದಿಯಾಗಿದೆ, ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದೆ. ಆದರೆ 40 ಪ್ರಕರಣಗಳಲ್ಲಿ ಮಾತ್ರ ವೈದ್ಯಾಧಿಕಾರಿಗಳು ಎಫ್.ಐ.ಆರ್ ದಾಖಲಿಸಲು ಮಾಹಿತಿ ನೀಡಿದ್ದಾರೆ.
ಇದು ಅತ್ಯಂತ ನಿರ್ಲಕ್ಷದ ನಡೆಯಾಗಿದೆ. ವೈದ್ಯಾಧಿಕಾರಿಗಳೇ ನೇರವಾಗಿ ಎಫ್.ಐ.ಆರ್ ದಾಖಲಿಸಬೇಕಿಲ್ಲ. ಅದರೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಯಾವುದೇ ಸಾಮಾಜಿಕ ಒತ್ತಡಗಳಿಗೆ ಮಣಿಯುವ ಅವಶ್ಯಕತೆ ಇಲ್ಲ. ಮಕ್ಕಳ ರಕ್ಷಣೆಗಾಗಿ ಇರುವ ಕಾಯ್ದೆಗಳನ್ನು ಪಾಲನೆ ಮಾಡಲೇ ಬೇಕು. ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಒಂದು ವೇಳೆ ವೈದ್ಯಾಧಿಕಾರಿಗಳು ಮಾಹಿತಿ ನೀಡದಿದ್ದರೆ, ಅವರ ವಿರುದ್ಧವು ಪ್ರಕರಣ ದಾಖಲಿಸಲಾಗುವುದು ಎಂದು ಕೆ.ನಾಗಣ್ಣಗೌಡ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಆರೋಗ್ಯ, ವಿಕಲಚೇತನರ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಯಾವುದೇ ಇಲಾಖೆಗಳ ನಡುವೆ ಸಮನ್ವಯವಿಲ್ಲ. ಒಂದೊಂದು ಇಲಾಖೆಗಳು ಆಯೋಗಕ್ಕೆ ಬೇರೆ ಬೇರೆ ಅಂಕಿ-ಅಂಶಗಳು ನೀಡುತ್ತಿವೆ. ಸರಿಯಾದ ಮಾಹಿತಿ ಇಲ್ಲ. ಆರೋಗ್ಯ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಕಾರ್ಯವೈಖರಿ ಸಮಾಧಾನ ತರುವಂತಿಲ್ಲ. ಜಿಲ್ಲೆಯಲ್ಲಿ 199 ತೀವ್ರ ಅಪೌಷ್ಠಿಕತೆಯಿಂದ ಬಳುತ್ತಿರುವ ಮಕ್ಕಳಿದ್ದಾರೆ.
ಆಯೋಗದ ಭೇಟಿ ವೇಳೆ ಕಂಡುಬಂದ ಅಂಶಗಳೆಂದರೆ, ಜಿಲ್ಲಾಸ್ಪತ್ರೆಯ ಚಿಕಿತ್ಸಾ ವಾರ್ಡ್‍ನಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಒಂದೇ ಮಗು ಚಿಕಿತ್ಸೆ ಪಡೆಯುತ್ತಿದೆ. ಹೊಸದಾಗಿ ನಿರ್ಮಿಸಿರುವ ಬಾಣಂತಿಯ ವಾರ್ಡ್‍ನಲ್ಲಿ ಬಿಸಿನೀರಿನ ವ್ಯವಸ್ಥೆಯಿಲ್ಲ. ಸ್ನಾನ ಮಾಡಲು ಪ್ರತ್ಯೇಕ ಸ್ನಾನ ಗೃಹವಿಲ್ಲ. ಎನ್.ಐ.ಸಿ.ಯು (ನವಜಾತ ಶಿಶುಗಳ ತ್ರೀವ ನಿಗಾ ಘಟಕ್ಕೆ) ವಾರ್ಡ್‍ಗೆ ಬೀಗ ಹಾಕಲಾಗಿದೆ. ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಜನ್ಮ ಧೃಡೀಕರಣಕ್ಕೆ ಆಧಾರ್ ಕಾರ್ಡ್ ಪಡೆಯುತ್ತಿದ್ದಾರೆ. ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಕಾಯ್ದೆಯಡಿ ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ದಂತವೈದ್ಯಾಧಿಕಾರಿಗಳ ಪ್ರಮಾಣ ಪತ್ರವನ್ನು ಮಾತ್ರ ವಯಸ್ಸಿನ ಧೃಡೀಕರಣಕ್ಕೆ ಪಡೆಯಬೇಕು. ಸ್ಕ್ಯಾನಿಂಗ್ ಘಟಕದಲ್ಲಿ ಅನಗತ್ಯವಾಗಿ ಬೇರೆ ವ್ಯಕ್ತಿಗಳು ಇರುವಂತಿಲ್ಲ. ಆದರೆ ನಿಯಮಗಳನ್ನು ಪಾಲಿಸದೇ ನಿರ್ಲಕ್ಷ ವಹಿಸಲಾಗಿದೆ ಎಂದು ಆಯೋಗ ತೀವ್ರ ಅಸಮಧಾನ ವ್ಯಕ್ತಪಡಿಸಿತು.
ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಗೃಹ ಆಧಾರಿತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಅಗತ್ಯ ನೆರವು ನೀಡಬೇಕು. ಇದರೊಂದಿಗೆ ಕಲಿಕಾ ನ್ಯೂನ್ಯತೆಗಳಾದ ಡಿಸ್‍ಲೆಕ್ಸಿಯಾ, ಡಿಸ್‍ಗ್ರಾಫಿಯಾ, ಡಿಸ್‍ಕ್ಯಾಲುಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಪ್ರಮಾಣ ಪತ್ರ ನೀಡಬೇಕು. ಇದರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಇಂತಹ ಮಕ್ಕಳು ಬೇರಿ ರೀತಿಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅಥವಾ ಪರೀಕ್ಷೆಯಿಂದ ವಿನಾಯಿತಿ ಪಡೆಯಲು ಅನುಕೂಲವಾಗುತ್ತದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಕೃಷಿ ಹೊಂಡಗಳ ಸುತ್ತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ಯಾರಿಗಳ ಸುತ್ತ ತಂತಿ ಬೇಲಿ ಅಳವಡಿಸಬೇಕು.
ಗ್ರಾಮ ಪಂಚಾಯಿತಿ ಹಾಗೂ ಸರ್ಕಾರ ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡುವ ಮುನ್ನ, ಕುಟುಂಬದಲ್ಲಿ ಬಾಲ್ಯ ವಿವಾಹವಾದರೆ ಸವಲತ್ತುಗಳನ್ನು ಹಿಂಪಡೆಯುವುದಾಗಿ ಷರತ್ತು ವಿಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳ ಸಹಾಯವಾಣಿ ಸಂಖ್ಯೆ 1098 ಶಾಲಾ ಕಾಲೇಜು, ಹಾಸ್ಟೆಲ್‍ಗಳು ಮಾತ್ರವಲ್ಲದೇ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಮಾದರಿಯಂತೆ, ಸಾರ್ವಜನಿಕರಿಗೆ ಗೋಚರವಾಗುವ ರೀತಿಯಲ್ಲಿ ಅಳವಡಿಸಬೇಕು ಎಂದು ಆಯೋಗದ ಸದಸ್ಯ ಡಾ. ಕೆ.ಟಿ.ತಿಪ್ಪೇಸ್ವಾಮಿ ಸೂಚನೆ ನೀಡಿದರು.
ಅಸಮರ್ಪಕ ಮೊಟ್ಟೆ ವಿತರಣೆಗೆ ಆಯೋಗ ಆಕ್ಷೇಪ:
ಅಜೀಮ್ ಪ್ರೇಮ್‍ಜಿ ಪೌಂಡೇಶನ್ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಲು ಸಹಾಯ ನೀಡಿದೆ. ಸರ್ಕಾರ ವಾರದ 6 ದಿನವೂ ಮೊಟ್ಟೆ ನೀಡುವಂತೆ ನಿರ್ದೇಶನ ನೀಡಿದೆ. ಆದರೆ, ಶಾಲೆಗಳಲ್ಲಿ ವಾರಕ್ಕೆ 3 ದಿನ ಮಾತ್ರ ಮೊಟ್ಟೆ ನೀಡುತ್ತಿರುವುದು ಆಯೋಗದ ಭೇಟಿ ವೇಳೆ ಗಮನಕ್ಕೆ ಬಂದಿದೆ. ಅಕ್ಷರ ದಾಸೋಹ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಾರದ 6 ದಿನವು ಮೊಟ್ಟೆ ನೀಡುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಜಿಲ್ಲೆಯ ಇಲಾಖೆ ಹಾಸ್ಟೆಲ್‍ಗಳಲ್ಲಿ ಮಕ್ಕಳ ಹಾಜರಾತಿಯನ್ನು ಬಗ್ಗೆ ನಿಗಾವಹಿಸುವಂತೆ ಆಯೋಗ ಸೂಚನೆ ನೀಡಿತು.
ಲೈಂಗಿಕ ದೌರ್ಜನ್ಯ ಎಫ್.ಐ.ಆರ್ ದಾಖಲಿಸಲು ಸೂಚನೆ :
ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದ ಇಂದಿರ ಗಾಂಧಿ ವಸತಿ ಶಾಲೆಯಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಕೂಡಲೇ ಎಫ್.ಐ.ಆರ್ ದಾಖಲಿಸಬೇಕು. ಅಧಿಕಾರಿಗಳ ವಿರುದ್ದ ಕೈಗೊಂಡ ಶಿಸ್ತು ಕ್ರಮದ ಕುರಿತು ವರದಿ ನೀಡುವಂತೆ ಆಯೋಗ ಅಧಿಕಾರಿಗಳಿಗೆ ಸೂಚನೆ ನೀಡಿತು.
ಸಭೆಯಲ್ಲಿ ಕ್ರೀಡಾ, ವಿಕಲಚೇತನ, ಪೊಲೀಸ್, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಮಕ್ಕಳ ಕಲ್ಯಾಣಕ್ಕಾಗಿ ಕೈಗೊಂಡ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳಾದ ಶಶಿಧರ ಕೋಸಂಬೆ, ಶೇಖರಗೌಡ ರಾಮತ್ನಾಳ, ಅರ್ಪಣಾ ಕೊಳ್ಳಾ, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಪೊಲೀಸ್ ಉಪಾಧೀಕ್ಷಕ ಪಿ.ಕೆ. ದಿನಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್.ಕೆ.ಹೆಚ್. ಜಿಲ್ಲಾ ಮಕ್ಕಳಾ ಕಲ್ಯಾಣ ಸಮಿತಿ ಅಧ್ಯಕ್ಷೆ ಶೀಲಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.