ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಸ್ತೆ, ವೃತ್ತ ಮತ್ತಿತರ ಸಿಗ್ನಲ್ ಗಳಲ್ಲಿ ಟ್ರಾಫಿಕ್ ಪೊಲೀಸರು ಇರಲ್ಲ ಎಂದುಕೊಂಡು ಸಂಚಾರ ನಿಯಮ ಗಾಳಿಗೆ ತೂರಿ ಆರಾಮಾಗಿ ವಾಹನ ಸಂಚರಿಸಿಕೊಂಡಿದ್ದವರಿಗೆ ಪೊಲೀಸ್ ಇಲಾಖೆ ಬಹುದೊಡ್ಡ ಶಾಕ್ ನೀಡಿದೆ. ಬೆಂಗಳೂರು ನಗರದ ಬಹುತೇಕ ರಸ್ತೆಗಳಲ್ಲಿ AI ಕ್ಯಾಮೆರಾಗಳನ್ನ ಪೊಲೀಸ್ ಇಲಾಖೆ ಅಳವಡಿಸಿದ್ದು ಸಂಚಾರ ನಿಯಮ ಉಲ್ಲಂಘನೆ ಮಾಡುವಂತ ಚಾಲಕರು ಮತ್ತು ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿವೆ.
2025ರ ಜನವರಿಯಿಂದ ಜುಲೈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ ಶೇ. 87ರಷ್ಟು ಎಐ ಕ್ಯಾಮರಾಗಳಿಂದಲೇ ಆಗಿವೆ.
ಈ ರೀತಿಯ ಕ್ಯಾಮೆರಾಗಳ ಬಳಕೆಯಿಂದಾಗಿ ಪೊಲೀಸರು ವಾಹನಗಳನ್ನ ತಡೆದು ದಂಡ ವಿಧಿಸಬೇಕಾದ ಅನಿವಾರ್ಯತೆ ಇರಲ್ಲ. ವಿಡಿಯೋ, ಫೋಟೋ ದಾಖಲಾಗುವ ಕಾರಣ ವಾಹನಗಳ ಮಾಲಕರು ನಾವು ಸಂಚಾರ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳುವಂತೆಯೂ ಇಲ್ಲ.
ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಹಿಂಬದಿ ಸವಾರರು ಹೆಲ್ಮೆಟ್ ಧರಸಿದೇ ಇರುವುದು, ಸೀಟ್ ಬೆಲ್ಟ್ ಧರಿಸದೆ ಇರುವುದು ಮತ್ತು ಸಿಗ್ನಲ್ ಜಂಪ್ನಂತಹ ಪ್ರಕರಣಗಳನ್ನ ಈ AI ಕ್ಯಾಮೆರಾಗಳು ಪತ್ತೆ ಮಾಡಲಿವೆ.
2025ರ ಜವರಿಯಿಂದ ಜುಲೈವರೆಗೆ ಒಟ್ಟು 30 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಪ್ರತಿದಿನ 11,800 ಕೇಸ್ ಗಳು ಈ AI ಕ್ಯಾಮೆರಾಗಳಿಂದಲೇ ವರದಿಯಾಗಿವೆ.
ಕೇವಲ 1,500 ಪ್ರಕರಣಗಳಷ್ಟೇ ಪೊಲೀಸರಿಂದ ದಾಖಲಾಗಿವೆ. ಇವುಗಳಲ್ಲಿ ನೋ ಎಂಟ್ರಿಯಲ್ಲಿ ವಾಹನ ಚಾಲನೆ, ನಿಷೇಧಿತ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ನಂತಹ ಕೇಸ್ಗಳೇ ಹೆಚ್ಚಿವೆ.
AI ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜನರಿಗೂ ಈ ಬಗ್ಗೆ ಜಾಗೃತಿ ಮೂಡಿದೆ.
ನಗರದಾದ್ಯಂತ 75ಕ್ಕೂ ಹೆಚ್ಚಿನ ಎಐ ರೀತಿಯ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಟನೆ ಕೇಸ್ಗಳ ಮಾಹಿತಿ ತಿಳಿಯಲು ಸಾರ್ವಜನಿಕರ ಅನುಕೂಲಕ್ಕೆ ASTraM ಆ್ಯಪ್ ಕೂಡ ಇದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
AI ಕ್ಯಾಮೆರಾಗಳ ಅಳವಡಿಕೆ ಬಳಿಕವೂ ಪಾರ್ಕಿಂಗ್ ನಿಯಮ ಮತ್ತು ಏಕ ಮುಖ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ತಡೆ ಮಾಡುವುದು ಟ್ರಾಫಿಕ್ ಪೊಲೀಸರಿಗೆ ತಲೆ ನೋವಾಗಿದೆ.

