ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತಾಲ್ಲೂಕಿನ ಕೆನ್ನಡಲು ಗ್ರಾಮದ ಮುಂಭಾಗದಲ್ಲಿರುವ ಸೇತುವೆ ಮರು ನಿರ್ಮಾಣ ಮಾಡುವಂತೆ ಜೈಭೀಮ್ ವಾರಿಯರ್ಸ್ ಕರ್ನಾಟಕ ವತಿಯಿಂದ ಸಂಸದ ಗೋವಿಂದ ಕಾರಜೋಳರವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಒಂದು ಸಾವಿರ ಜನಸಂಖ್ಯೆಯುಳ್ಳ ಕೆನ್ನಡಲು ಗ್ರಾಮದಲ್ಲಿ ಎಲ್ಲಾ ಜಾತಿಯವರು ಅನ್ಯೋನ್ಯವಾಗಿ ಜೀವಿಸುತ್ತಿದ್ದಾರೆ. ೭೦ ವರ್ಷಗಳ ಹಳೆಯದಾಗಿರುವ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಯಾವಾಗ ಕುಸಿಯಲಿದೆಯೋ ಎನ್ನುವುದನ್ನು ಹೇಳುವಂತಿಲ್ಲ. ಗ್ರಾಮಸ್ಥರು ಜೀವ ಭಯದಲ್ಲಿಟ್ಟುಕೊಂಡು ಸೇತುವೆ ಮೇಲೆ ಸಂಚರಿಸಬೇಕಾಗಿದೆ. ನೂರಾರು ವಾಹನಗಳು ಇಲ್ಲಿಯೇ ಓಡಾಡಬೇಕು.
ಸುತ್ತಲೂ ಬೆಟ್ಟ ಗುಡ್ಡಗಳಿರುವುದರಿಂದ ಕಾಡು ಪ್ರಾಣಿಗಳು ಗ್ರಾಮದೊಳಗೆ ಪ್ರವೇಶಿಸುತ್ತವೆ. ರಾತ್ರಿ ವೇಳೆ ಕತ್ತಲೆಯಾಗಿರುವುದರಿಂದ ಹೈಮಾಸ್ ದೀಪ ಅಳವಡಿಸಬೇಕು. ಜಮೀನಿಗೆ ಹೋಗಲು ರೈತರಿಗೆ ತೊಂದರೆಯಾಗಿರುವುದರಿಂದ ಸಿ.ಸಿ.ರಸ್ತೆ ನಿರ್ಮಾಣ ಮಾಡುವಂತೆ ಸಂಸದರಲ್ಲಿ ಗ್ರಾಮಸ್ಥರು ವಿನಂತಿಸಿದರು.
ಜೈಭೀಮ್ ವಾರಿಯರ್ಸ್ ಕರ್ನಾಟಕ ರಾಜ್ಯಾಧ್ಯಕ್ಷ ಪಿ.ಆರ್.ಹರೀಶ್‌ಕುಮಾರ್, ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಉಮೇಶ್ ಡಿ. ರಂಗಸ್ವಾಮಿ, ಜಿ.ರವಿಕುಮಾರ್, ಸಂದೇಶ್‌ಕುಮಾರ್, ಮಲ್ಲಿಕಾರ್ಜುನ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

