ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಬುಧುವಾರ ಆಯೋಜಿಸಲಾದ ಏಕತಾ ನಡಿಗೆಗೆ ಸಂಸದ ಗೋವಿಂದ ಎಂ ಕಾರಜೋಳ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ಸರ್ಕಲ್ ಬಳಿ ಚಾಲನೆ ನೀಡಿದರು.
ಮೊದಲಿಗೆ ಸರ್ಧಾರ್ ವಲ್ಲಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಅವರು, ನಂತರ ಹಸಿರು ನಿಶಾನೆ ತೋರುವ ಏಕತಾ ನಡಿಗೆಗೆ ಚಾಲನೆ ನೀಡಿದರು.
ಮೈ ಭಾರತ್ ಸ್ವಯಂ ಸೇವಕರು, ಎನ್.ಸಿ.ಸಿ ಕೆಡಿಟ್‍ಗಳು, ಎನ್.ಎಸ್.ಎಸ್ ಸ್ವಯಂ ಸೇವಕರು, ಕ್ರೀಡಾಪಟಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಏಕತಾ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಕನಕ ವೃತ್ತದಿಂದ ಆರಂಭವಾದ ಏಕತಾ ನಡಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ರಾಣಿ ಚೆನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತದ ಮೂಲಕ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ತಲುಪಿತು.
ಜಿಲ್ಲಾ ಕ್ರೀಡಾಂಗಣದಲ್ಲಿನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಗೋವಿಂದ ಎಂ ಕಾರಜೋಳ ದೇಶದ ಎಲ್ಲಡೆ ಅಕ್ಟೋಬರ್ 31 ರಿಂದ ನವೆಂಬರ್ 25 ವರೆಗೆ ಸರ್ದಾರ್ ವಲ್ಲಭಾಯ್ ಪಟೇಲ್ ಜನ್ಮದಿನಾಚರಣೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಮಕ್ಕಳಿಗೆ ವಲ್ಲಭಾಯ್ ಪಟೇಲ್ ಅವರ ಕುರಿತು ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಪ್ರತಿಯೊಬ್ಬರು ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜೀವನ ಚರಿತ್ರೆಯನ್ನು ಓದಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆಯನ್ನು ಮಹತ್ವವನ್ನು ಅರಿತುಕೊಳ್ಳಬೇಕು. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿದ್ದ ಎಲ್ಲಾ ರಾಜ ಸಂಸ್ಥಾನಗಳನ್ನು ಒಂದು ಮಾಡುವಲ್ಲಿ ವಲ್ಲಭಾಯ್ ಪಟೇಲ್ ಕೊಡುಗೆ ಮುಖ್ಯವಾಗುವುದು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮೇರಾ ಯುವ ಭಾರತ್‍ನ ಜಿಲ್ಲಾ ಯುವಜನ ಅಧಿಕಾರಿ ಸ್ನೇಹಲತಾ, ಗಣ್ಯರಾದ ಕೆ.ಟಿ. ಕುಮಾರಸ್ವಾಮಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

