ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಹಿಂಗಾರು ಮಳೆಯಾಗಿದೆ, ಇತ್ತೀಚಿಗೆ ಸುರಿಯುತ್ತಿರುವ ಹಿಂಗಾರು ಮಳೆಯಿಂದ ಜಿಲ್ಲೆಯ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ, ಅರ್ಧ ಶತಮಾನದಷ್ಟು ಕಾಲದಿಂದಲೂ ತುಂಬದೇ ಇದ್ದ ಕೆರೆಗಳು ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆಯಾದರೂ ಅವಶ್ಯಕತೆಗಿಂತ ಹೆಚ್ಚಿನ ಮಳೆ ರೈತರ ಬದುಕನ್ನು ಅಸ್ತವ್ಯಸ್ತಗೊಳಿಸುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.
ಈ ಬಗ್ಗೆ ರಾಜ್ಯ ಸರ್ಕಾರ ರೈತರ ನೆರವಿಗೆ ಕೂಡಲೇ ಧಾವಿಸಬೇಕಾಗಿದೆ. ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕಾಗಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಆದ್ಯತೆಯ ಸ್ಪಷ್ಟತೆಯಿಲ್ಲ, ಯಾವುದಕ್ಕೆ ಆದ್ಯತೆ ನೀಡಬೇಕೆಂಬುದು ರಾಜ್ಯ ಸರ್ಕಾರಕ್ಕೆ ತಿಳಿದಿಲ್ಲ, ಸಮರೋಪಾದಿಯಲ್ಲಿ ಅತಿವೃಷ್ಟಿಯಿಂದಾದ ನಷ್ಟ ಕುರಿತು ಸಮೀಕ್ಷೆ ನಡೆಸಬೇಕಾದ ರಾಜ್ಯ ಸರ್ಕಾರ ಉಪ ಚುನಾವಣೆಯನ್ನು ಗಂಭೀರವಾಗಿ ತಗೆದುಕೊಂಡು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸಚಿವರ, ಶಾಸಕರ ದಂಡನ್ನು ಕಳುಹಿಸಲು ಸಭೆಗಳ ಮೇಲೆ ಸಭೆಗಳನ್ನು ಆಯೋಜಿಸುತ್ತಿದೆ.
ಇದೇ ಕೆಲಸವನ್ನು ಅತಿವೃಷ್ಟಿಯಿಂದಾದ ನಷ್ಟ ಸಮೀಕ್ಷೆಗೆ ಸರ್ಕಾರ ಸಚಿವರನ್ನು ಶಾಸಕರನ್ನು ನಿಯೋಜನೆ ಮಾಡಬಹುದಿತ್ತು. ಅದನ್ನು ಬಿಟ್ಟು ಚುನಾವಣೆಯನ್ನೇ ಪ್ರಥಮ ಆದ್ಯತೆಯನ್ನಾಗಿಸಿಕೊಂಡಿರುವುದು ರೈತರ ಬಗೆಗಿನ ನಿಲ್ಷಕ್ಷ್ಯತೆ ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಹಿಂಗಾರು ಮಳೆ ಅಬ್ಬರಕ್ಕೆ ರೈತರ ಹೊಲದಲ್ಲೇ ಬೆಳೆಗಳು ಕೊಳೆಯುತ್ತಿವೆ, ಇಳುವರಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿದೆ, ರೈತರು ಖರ್ಚು ಮಾಡಿದ ಹಣವನ್ನೂ ಸಹ ವಾಪಾಸ್ಸು ಪಡೆಯಲಾರದಂತಹ ಸ್ಥಿತಿಯಲ್ಲಿದ್ದಾರೆ. ಕಟಾವಿಗೆ ಬಂದ ಬೆಳೆಗಳು ನೀರು ಪಾಲಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯೊಂದರಲ್ಲಿಯೇ ಅಕ್ಟೋಬರ್ ತಿಂಗಳಿನಲ್ಲಿ ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ. ಈರುಳ್ಳಿ ಹೊಲದಲ್ಲಿಯೇ ಕೊಳೆತುಹೋಗುತ್ತಿದೆ. ಮೆಕ್ಕೆಜೋಳ ಕಟಾವಿಗೆ ಬಂದಿದ್ದರೂ ಕೂಡ ಹೊಲದಲ್ಲಿಯೇ ಮೊಳಕೆಯಾಗುತ್ತಿವೆ. ಹೀಗೆ ಚಿತ್ರದುರ್ಗ ಜಿಲ್ಲೆಯಲ್ಲಿ ೨೫೦೦ ಎಕರೆ ಕೃಷಿ ಹಾಗು ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ ಹಾಗೂ ೯೦೦ ಕ್ಕೂ ಹೆಚ್ಚು ಮನೆಗಳು ಭಾಗಶ: ಹಾನಿಗೊಳಗಾಗಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಅತಿವೃಷ್ಟಿ ಸಂತ್ರಸ್ಥರ ನೆರವಿಗೆ ಧಾವಿಸಬೇಕು, ಹಲವು ದಶಕಗಳಿಂದ ತುಂಬಿರುವ ಕೆರೆಕಟ್ಟೆಗಳಲ್ಲಿ ನೀರನ್ನು ಸಂರಕ್ಷಣೆ ಮಾಡುವ ಕಡೆ ಸರ್ಕಾರ ಗಮನ ಹರಿಸಬೇಕಾಗಿದೆ. ಇದಕ್ಕಾಗಿ ಸಣ್ಣ ನೀರಾವರಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ ಕೆರೆಗಳ ಸುರಕ್ಷತೆಯ ಬಗ್ಗೆ ವರದಿ ಪಡೆಯಬೇಕು, ನೀರು ಪೋಲಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಕಡೆ ಸರ್ಕಾರ ಗಮನ ಹರಿಸಬೇಕು ಎಂದು ಸಂಸದರು ಆಗ್ರಹ ಮಾಡಿದ್ದಾರೆ.
ನಗರ ಹಾಗು ಗ್ರಾಮಾಂತರ ಭಾಗಗಗಳಲಿ ರಸ್ತೆಗಳಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿವೆ, ಗುಂಡಿ ಮುಚ್ಚಲೂ ಕೂಡ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ, ಗುಂಡಿ ಬಿದ್ದಿರುವ ಕಾರಣ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದೇ ಜನರ ಜೀವದ ಜೊತೆ ಚಲ್ಲಾಟವಾಡುವ ಕೆಲಸಕ್ಕೆ ಸರ್ಕಾರ ಇಳಿದಿದೆ. ಕಳೆದ ಮೂರ್‍ನಾಲ್ಕು ತಿಂಗಳುಗಳಿಂದ ಮೂಡಾ ಹಗರಣ ಮುಚ್ಚಿಹಾಕುವ ಕೆಲಸ ಈಗ ಉಪಚುನಾವಣೆಯ ಕೆಲಸದಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಅಭಿವೃದ್ದಿ ಮರೀಚಿಕೆಯಾಗಿದೆ.
ರಾಜ್ಯ ಸರ್ಕಾರಕ್ಕೆ ಉಪಚುನಾವಣೆ ಮುಖ್ಯವೋ ಅಥವಾ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವುದು ಮುಖ್ಯವೋ ಎಂಬುದನ್ನು ಸ್ಪಷ್ಟಪಡಿಸಲಿ. ಅತಿವೃಷ್ಟಿಯಿಂದ ಆಗಿರುವ ನಷ್ಟಕ್ಕೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಬದ್ದತೆ ಹಾಗೂ ಮಾನವೀಯತೆ ಮೆರೆಯಲಿ ಎಂದು ಗೋವಿಂದ ಕಾರಜೋಳ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.