ಶಿಕ್ಷಣದ ಮೂಲಕ ಸಮಾಜದ ಮಕ್ಕಳು ಮುಖ್ಯವಾಹಿನಿಗೆ ಬರಲಿ- ಸಂಸದ ಗೋವಿಂದ ಎಂ ಕಾರಜೋಳ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಮಾಜದಲ್ಲಿ
ಅತ್ಯಂತ ತುಳಿತಕ್ಕೊಳಗಾಗಿರುವ ಪರಿಶಿಷ್ಟ ಜಾತಿ,  ಪರಿಶಿಷ್ಟ  ಪಂಗಡದವರು  ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳುವ ಜತೆಗೆ ಸಮುದಾಯ ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಸಂಸದ  ಗೋವಿಂದ ಎಂ.ಕಾರಜೋಳ ಕರೆ ನೀಡಿದರು.

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ  ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ  ಆಯೋಜಿಸಲಾಗಿದ್ದ  ವಾಲ್ಮೀಕಿ ನಾಯಕ ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಮಹತ್ವ ನೀಡಿದ್ದಾರೆ. ಅವರ ದಾರಿಯಲ್ಲಿ  ಪ್ರತಿಯೊಬ್ಬರು  ಸಾಗಬೇಕಿದೆ.  ಸರ್ಕಾರಿ ಕೆಲಸ ಸಿಕ್ಕವರು ಹುಟ್ಟಿದ ಊರು, ಒಡಹುಟ್ಟಿದವರನ್ನು ಎಂದಿಗೂ  ಮರೆಯಬಾರದು. ಎಲ್ಲರಿಗೂ ಸರ್ಕಾರಿ ಕೆಸಲ ಸಿಗುವುದಿಲ್ಲ. ನೌಕರಿ ಸಿಕ್ಕವರು ತಾವಾಯಿತು ತಮ್ಮ ಕುಟುಂಬವಾಯಿತೆಂದು ಸುಮ್ಮನಿರುವ ಬದಲು ಬಂಧು, ಬಳಗ, ಅಸಹಾಯಕರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ವರ್ಗಕ್ಕೆ ಶೇ. 3 ರಿಂದ 7 ಹಾಗೂ ಪರಿಶಿಷ್ಠ ಜಾತಿಗೆ ಶೇ.15 ರಿಂದ 17 ಕ್ಕೆ  ಮೀಸಲಾತಿ  ಪ್ರಮಾಣ ಹೆಚ್ಚಿಸಿದ್ದರಿಂದ ಶಿಕ್ಷಣ, ಉದ್ಯೋಗದಲ್ಲಿ ಅನುಕೂಲವಾಗಿದೆ. ಹಾಗಾಗಿ ಅವರನ್ನು ಸಂದರ್ಭದಲ್ಲಿ ಸ್ಮರಿಸಬೇಕಿದೆ ಎಂದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 15  ವರ್ಷಗಳಿಂದಲೂ  ವಾಲ್ಮೀಕಿ  ನಾಯಕ ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡು ಬರುತ್ತಿರುವುದರಿಂದ ಜನಾಂಗದ ಸಾಧಕರು, ಪ್ರತಿಭಾವಂತರನ್ನು ಗುರುತಿಸಲು ನೆರವಾಗಿದೆ. ಎಲ್ಲಾ ಜಾತಿ,  ಸಮಾಜಗಳಲ್ಲಿ  ರಾಜಕೀಯ ವ್ಯವಸ್ಥೆ ಇದೆ. ಅದಕ್ಕಾಗಿ ಜನಪ್ರತಿನಿಧಿಗಳು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿರುವುದು ಕಷ್ಟ. ಎಲ್ಲರ ಕಷ್ಟಸುಖಗಳನ್ನು ಕೇಳಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ ಎಂದು ಹೇಳಿದರು.

ಸರ್ಕಾರಿ ನೌಕರಿ ಸಿಕ್ಕಿತೆಂದು ನಿಮ್ಮ ಪಾಡಿಗೆ ನೀವು ಇರುವುದು ಸರಿಯಲ್ಲ. ಶೋಷಿತರು, ತುಳಿತಕ್ಕೊಳಗಾದವರು, ಕುಟುಂಬದವರಿಗೆ ನೆರವಿನ ಹಸ್ತ ಚಾಚಬೇಕು. ಪರಿಶ್ರಮ ಇಚ್ಚಾಶಕ್ತಿಯಿದ್ದರೆ ಮಾತ್ರ  ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಯಾವ ಹುದ್ದೆ, ಅಧಿಕಾರದಲ್ಲಿದ್ದೇವೆನ್ನುವುದು ಮುಖ್ಯವಲ್ಲ  ಸಾಧನೆ ಮಾಡುವ ಛಲವಿರಬೇಕು.

ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಗಳಿಸುವುದಷ್ಟೆ ಸಾಧನೆ ಅಂದುಕೊಳ್ಳಬಾರದು. ಶಿಕ್ಷಣದ ಜೊತೆ ಗುರುಹಿರಿಯರು ತಂದೆತಾಯಿಗಳನ್ನು ಗೌರವಿಸುವ ಸಂಸ್ಕøತಿ ಸಂಸ್ಕಾರ ಕಲಿಯಬೇಕು ತಿಳಿಸಿದರು.

ಪರಿಶಿಷ್ಟ ಜಾತಿ,  ಪರಿಶಿಷ್ಟ  ಜನಾಂಗದವರು  ಕಷ್ಟದಲ್ಲಿರುವ ಬೇರೆ ಜಾತಿಯವರಿಗೆ ಸಹಾಯ ಮಾಡುವ  ಗುಣ ಬೆಳೆಸಿಕೊಳ್ಳಿ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ  ಬೆಂಗಳೂರಿನ ಉದ್ಯಾನವನದಲ್ಲಿ 258 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ ಫಲವಾಗಿ ಪರಿಶಿಷ್ಟ ವರ್ಗದವರಿಗೆ ಶೇ.3 ರಿಂದ 7 ಹಾಗೂ ಪರಿಶಿಷ್ಟ ಜಾತಿಯವರಿಗೆ ಶೇ.15 ರಿಂದ 17 ರಷ್ಟು ಮೀಸಲಾತಿ ಹೆಚ್ಚಿಸಿರುವುದನ್ನು ಸದುಪಯೋಗಪಡಿಸಿಕೊಂಡು ಜನಾಂಗದ ಮಕ್ಕಳು ಶಿಕ್ಷಣವಂತರಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,  ರಾಜಕೀಯವಾಗಿ ಬಲಾಢ್ಯರಾಗಬಹುದು ಎಂದು ತಿಳಿಸಿದ ಅವರು,   ಸಂವಿಧಾನ ಶಿಲ್ಪಿ  ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿ ಎಲ್ಲರೂ ಸಾಗೋಣ. ಸದಾ ಜನಾಂಗದ ಜೊತೆಯಲ್ಲಿರುತ್ತೇನೆಂದು ಟಿ.ರಘುಮೂರ್ತಿ ಭರವಸೆ ನೀಡಿದರು.

ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ.ಹೆಚ್.ಗುಡ್ಡದೇಶ್ವರಪ್ಪ ಸಮಾವೇಶದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಎಚ್.ಎಂ.ಎಸ್.ನಾಯಕ ಅವರಿಗೆ ಜೀವಮಾನ ಸಾಧನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಯಕ ಸಮಾಜದ ಸಾಧಕರಾದ ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಿಲಾರಿ ಜೋಗಯ್ಯ,  ಪತ್ರಕರ್ತ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ. ರಾಜಶೇಖರಉದ್ಯಮಿ ಮಂಜುಳ, ಮುಖ್ಯಮಂತ್ರಿ ಪದಕ ಪುರಸ್ಕೃತರು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಗಣೇಶ್ ಹಾಗೂ ಸಮಾಜದ .ಬಿ.ಬಸವರಾಜಪ್ಪ, ಹೆಚ್.ತಿಪ್ಪಯ್ಯ, ಪಿ.ವಿ.ಸವಿತಾ, .ನಾಗರಾಜ, ಎಸ್.ರಾಜಪ್ಪ, ಬಿ.ವಿಮಾಲಾಕ್ಷಿ, ಎಂ.ಎಂ.ತಿಪ್ಪೇಸ್ವಾಮಿ, ಜೆ.ಎಸ್.ರವಿಕುಮಾರ್, ಎಂ.ಜೆ.ಬೋರೇಶ  ಅವರನ್ನು ಸನ್ಮಾನಿಸಲಾಯಿತು. ಹಾಗೂ 135 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ  ಪಪ್ಪಿವಿಜಯ ನಗರ  ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಿ.ಜಿ.ಶ್ರೀನಿವಾಸ್, ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್, ಡಾ.ಸಿ.ಎಲ್.ಪಾಲಾಕ್ಷ  ಸೇರಿದಂತೆ ನಾಯಕ ಸಮಾಜದ ಗಣ್ಯರು ಇದ್ದರು.

- Advertisement -  - Advertisement - 
Share This Article
error: Content is protected !!
";