ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಾ. ಡಿ.ಎಂ.ನಂಜುಡಪ್ಪ ವರದಿ ಶಿಫಾರಸ್ಸಿನ ಹಿನ್ನಲೆಯಲ್ಲಿ 2007-08 ರಿಂದ 2023-24ನೇ ಸಾಲಿನ ವರೆಗೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ರೂ.45,789.50 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು ರೂ.37,661.65 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೂ.34,381.02 ಕೋಟಿ ವೆಚ್ಚವಾಗಿದೆ. ಆದರೂ ಹಿಂದುಳಿದ ತಾಲ್ಲೂಕುಗಳಲ್ಲಿ ಮೂಲಭೂತ ಸೌಕರ್ಯಗಳು ವೃದ್ಧಿಯಾಗಿಲ್ಲ.
ಸರ್ಕಾರದ ಆಸ್ತಿಗಳು ಸೃಜನೆಯಾಗಿಲ್ಲ. ಪ್ರಸ್ತುತ ಸಮಿತಿಯು, ಅನುದಾನ ಸದ್ಬಳಕೆಯಾಗಿದೆಯೋ ಅಥವಾ ಇಲ್ಲವೋ ಎನ್ನುವ ಕುರಿತು ಮೌಲ್ಯಮಾಪನ ಮಾಡಿ, ವರದಿಯನ್ನು ನೀಡಬೇಕಾಗಿ ಸಂಸದ ಗೋವಿಂದ ಎಂ ಕಾರಜೋಳ ಒತ್ತಾಯಿಸಿದರು.
ದೇಶದಲ್ಲಿ ಸದಾ ಬರಗಾಲಕ್ಕೆ ತುತ್ತಾಗುವ 16 ಜಿಲ್ಲೆಗಳ ಪೈಕಿ ಚಿತ್ರದುರ್ಗ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ.
ಜಿಲ್ಲೆಯ ಬಹುತೇಕ ರೈತರು ಮಳೆ ಆಶ್ರಿತ ಒಣ ಬೇಸಾಯ ನಂಬಿಕೊಂಡಿದ್ದಾರೆ. ಬ್ಯಾಂಕುಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಲ ಸೌಲಭ್ಯ ನೀಡುವಲ್ಲಿ ಕ್ರಮ ವಹಿಸಿಲ್ಲ. ಜಿಲ್ಲೆಯಲ್ಲಿ ಉತ್ತಮ ಖನಿಜ ಸಂಪತ್ತು ಇದೆ. ಈ ಖನಿಜ ಸಂಪತ್ತು ಜಿಲ್ಲೆಯಲ್ಲಿಯೇ ಸಂಸ್ಕರಿಸಿ ರಪ್ತು ಮಾಡಿದರೆ, ಜಿಲ್ಲೆಗೆ ಅಭಿವೃದ್ದಿಗೆ ಪೂರಕವಾಗಲಿದೆ. ಜನರಿಗೂ ಉದ್ಯೋಗವಕಾಶಗಳು ಲಭಿಸುತ್ತವೆ. ಈ ನಿಟ್ಟಿನಲ್ಲಿ ಸಮಿತಿ ವರದಿ ನೀಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.