ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರತಿ ಮನೆಗೂ ನಲ್ಲಿ ನೀರೊದಗಿಸುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಸರಿ ಸುಮಾರು 4 ಸಾವಿರ ಕೋಟಿ ರೂ.ಹಣ ನೀಡಿದೆ. ಆದರೆ ಸಮರ್ಪಕವಾಗಿ ಯೋಜನೆ ಜಾರಿಗೆ ತಂದಿಲ್ಲ, ಜಲ ಜೀವನ್‌ಮಿಷನ್‌ಯೋಜನೆಯು ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕ ತಂದೊಡ್ಡುತ್ತಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ, ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್, ಶಾಸಕ ವೀರೇಂದ್ರ ಪಪ್ಪಿ ಅವರು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಪ್ರಸಂಗ ಜರುಗಿತು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸಭೆ(ದಿಶಾ)ಯ ಅಧ್ಯಕ್ಷತೆ ವಹಿಸಿ ಅವರು ಅನುಪಾಲನಾ ವರದಿ ವಿಷಯ ಪ್ರಸ್ತಾಪ ಮಾಡಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ವಿರುದ್ಧ ಗರಂ ಆದ ಸಂಸದರು, ಶಾಸಕರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮದಲ್ಲಿ ಒಂದಾದರೂ ರಸ್ತೆ ಚೆನ್ನಾಗಿವೆಯಾ, ಮನೆ ಮನೆಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಸ್ತೆ ಅಗೆದು ಹಾಗೇ ಬಿಟ್ಟಿದ್ದೀರಿ, ಈ ಯೋಜನೆಗೆ 941 ಕೋಟಿ ರೂ ಅನುದಾನ ನೀಡಲಾಗಿದೆ. ಇದಲ್ಲದೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮೂರು ಸಾವಿರ ಕೋಟಿ ನೀಡಲಾಗಿದೆ.
ಒಟ್ಟಾರೆ 4 ಸಾವಿರ ಕೋಟಿ ರೂ.ಗಳನ್ನು ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ. ಆದರೂ ಸಮರ್ಪಕವಾದ ಕಾಮಗಾರಿ ನಡೆಯುತ್ತಿಲ್ಲ, ನೀವು ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ನಿಮ್ಮ ಅಧೀನಾಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲ, ಎಲ್ಲ ಕಡೆ ಲೋಪ ಕಂಡು ಬಂದಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸಂಸದರು ಸೂಚನೆ ನೀಡಿದರು.
ಊರಿನ ಯಾವುದೇ ಗ್ರಾಮಕ್ಕೆ ಹೋದರೂ ಜನರು ಪ್ರಶ್ನಿಸುತ್ತಾರೆ. ರಸ್ತೆಗಳನ್ನು ಅಗೆದು ತಿಂಗಳು ಗಟ್ಟಲೆ ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ವೃದ್ಧರು, ಕುರಿ ಮೇಕೆ, ದನಕರಗಳನ್ನು, ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅನಾನುಕೂಲವಾಗಿದೆ, ಕೂಡಲೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಅಲ್ಲದೆ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಸೂಚನೆ ನೀಡಿದರು.
ಬ್ಯಾಂಕ್ ಅಧಿಕಾರಿಗಳ ರೀತಿ ಕಚೇರಿಗೆ ಬಂದು ಹೋಗಬೇಡಿ, ಬೆಳಿಗ್ಗೆ ಬೇಗ ಬರಬೇಕು, ಸಂಜೆ ತನಕ ಕಚೇರಿಯಲ್ಲಿ ಕೂರಬೇಕು, ಪ್ರತಿಯೊಂದು ಇಲಾಖೆ ಅಧಿಕಾರಿಗಳ ಟಿಪಿ ಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಜನಪ್ರತಿನಿಧಿಗಳು ತಾಕೀತು ಮಾಡಿದರು.
ಪ್ರತಿ ಮನೆ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಒದಸಗಿಸಲು 4 ಸಾವಿರ ಕೋಟಿ ನೀಡಿದರೂ ಸದ್ಬಳಕೆ ಆಗುತ್ತಿಲ್ಲ, ಒಂದು ಮನೆಗೆ ಸಂಪರ್ಕ ಕಲ್ಪಿಸಿದರೆ ಮತ್ತೊಂದು ಮನೆಗೆ ಸಂಪರ್ಕ ಕಲ್ಪಿಸುತ್ತಿಲ್ಲ, ಹಲವು ದೂರುಗಳು ಸಾರ್ವಜನಿಕರಿಂದ ಬಂದಿವೆ. ನಾಲ್ಕು ಸಾವಿರ ಕೋಟಿ ಯೋಜನೆ ದೊಡ್ಡ ಆಸ್ತಿ ಆಗಬೇಕು, ಆ ಕೆಲಸ ಆಗುತ್ತಿಲ್ಲ, ಗುತ್ತಿಗೆದಾರರು ನಿಮ್ಮ ಮಾತು ಕೇಳುತ್ತಿಲ್ಲವೇ ಎಂದು ಕಾರ್ಯಪಾಲಕ ಅಭಿಯಂತರ ಪಾಟೀಲ್ ಅವರನ್ನ ಶಾಸಕ ನವೀನ್ ಖಾರವಾಗಿ ಪ್ರಶ್ನಿಸಿದರು.
ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು ಕೊಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯವೋ, ಅಧಿಕಾರಿಗಳ ಬೇಜವಾಬ್ದಾರಿಯಿಂದಲೋ ಮನೆಗಳ ಮುಂದೆ ಮೊಣಕಾಲುದ್ಧ ಗುಂಡಿಗಳು ಬಿದ್ದಿದ್ದು ಸಣ್ಣ ಮಕ್ಕಳನ್ನು ಮನೆಯಿಂದ ಹೊರ ಬಿಡಲಾಗದಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ತರಾಟೆ ತೆಗೆದುಕೊಂಡರು.
ಜಲಜೀವನ್‌ಮಿಷನ್‌ಯೋಜನೆಯ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಮನಬಂದಂತೆ ರಸ್ತೆಗಳನ್ನು ಅಗೆದು ಗುಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟು ಸಂಪೂರ್ಣ ರಸ್ತೆಗಳನ್ನು ಹಾಳು ಮಾಡಲಾಗಿದೆ ಎಂದು ಕ್ಯಾದಿಗೆರೆ ಗ್ರಾಮಸ್ಥರು ಇಂದು ಬೆಳಿಗ್ಗೆ ನನ್ನ ಬಳಿ ಬಂದು ದೂರಿದ್ದಾರೆಂದು ಶಾಸಕ ವೀರೇಂದ್ರ ಪಪ್ಪಿ ಕಿಡಿ ಕಾರಿದರು.
ಸ್ಥಳ ಪರಿಶೀಲನೆ-ಕಾಮಗಾರಿ ಪೂರ್ಣಗೊಳಿಸದೆ ಅರೆಬರೆ ಕಾಮಗಾರಿ ಮುಗಿಸಿ ನಳ ನೀರು ಸಂಪರ್ಕ ನೀಡಿಲ್ಲ, ಆರು ತಿಂಗಳಾದರೂ ಸಹ ಇಂದಿಗೂ ಗುಂಡಿಗಳನ್ನು ಮುಚ್ಚಿಲ್ಲ. ಕೆಲವೆಡೆ ಗ್ರಾಮದ ಉದ್ದಗಲಕ್ಕೂ ಇರುವ ರಸ್ತೆಗಳನ್ನು ಅಗೆದು ಎರಡು ಭಾಗಗಳನ್ನಾಗಿ ಮಾಡಿ ರಸ್ತೆ ಮಧ್ಯ ಭಾಗದಲ್ಲಿ ಒಂದೆರಡು ಅಡಿ ಗುಂಡಿ ಅಗೆದು ಹಾಗೆ ಬಿಟ್ಟ ಪರಿಣಾಮ ಕಾಂಕ್ರಿಟ್‌ರಸ್ತೆಗಳ ತ್ಯಾಜ್ಯ ಎಲ್ಲೆಂದರಲ್ಲಿ ಹಾಗೆ ಬಿಟ್ಟ ಪರಿಣಾಮ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ ಇಂತಹ ಸ್ಥಳಗಳಿಗೆ ಪರಿಶೀಲನೆಗೆ ಬರುತ್ತೇವೆ. ನಾವೇ ಎಲ್ಲವನ್ನು ತೋರಿಸುತ್ತೇವೆ ಎಂದು ಸಂಸದ ಗೋವಿಂದ ಕಾರಜೋಳ ಅಧಿಕಾರಿಗಳ ವಿರುದ್ಧ ಗರಂ ಆದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಾಮಗಾರಿಗಳು ಪೂರ್ಣಗೊಂಡು ರಸ್ತೆ ದುರಸ್ತಿ ಮಾಡಿರುವಂತ ಹಳ್ಳಿಗಳ ಪಟ್ಟಿ ಸೇರಿದಂತೆ ಯೋಜನೆ ವ್ಯಾಪ್ತಿಯ ಎಲ್ಲ ಊರುಗಳ ಪಟ್ಟಿಯನ್ನು ಕೂಡಲೇ ಸಲ್ಲಿಸುವಂತೆ ಕಾರ್ಯಪಾಲಕ ಅಭಿಯಂತರ ಪಾಟೀಲ್ ಗೆ ಸೂಚನೆ ನೀಡಿದರು.
ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಶಾಸಕ ಕೆ.ಎಸ್.ನವೀನ್, ಸಂಸದ ಗೋವಿಂದ ಕಾರಜೋಳ ಅವರು ಬೇಸರ ವ್ಯಕ್ತ ಪಡಿಸಿದರು.
ನಗರ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವಾಗ ಆ ಮಾರ್ಗ ಮಧ್ಯ ಬರುವಂತ ಎಲ್ಲ ಹಳ್ಳಿಗಳನ್ನು ಸೇರಿಸಿಕೊಂಡು ಡಿಪಿಆರ್ ಮಾಡಬೇಕು ಎಂದು ಸಂಸದರು ತಾಕೀತು ಮಾಡಿದರು.
ಅಧಿಕಾರಿಗಳು ನೀಡುವ ಅನುಪಾಲನಾ ವರದಿ ಕೇವಲ ನಿಮ್ಮಗಳ ಖುಷಿಗಾಗಿ ಇದ್ದಂತೆ ಕಾಣುತ್ತಿದೆ. ಮಲ್ಲಾಪುರ ಕೆರೆ ಸಮಸ್ಯೆ ಸೇರಿದಂತೆ ಮತ್ತಿತರ ಸಮಸ್ಯೆಗಳ ಕುರಿತು ಒಂದು ಕೆಲಸ ಮಾಡಲು ಹತ್ತತ್ತು ಸಲ ಹೇಳಿದರೂ ನೀವು ಮಾಡುತ್ತಿಲ್ಲ, ಯಾಕಿಷ್ಟು ನಿರ್ಲಕ್ಷ್ಯ ಎಂದು ನವೀನ್ ಅಸಮಾಧಾನ ವ್ಯಕ್ತ ಪಡಿಸಿದರು.