ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಮತ್ತು ನಿಧಾನಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸಮಗ್ರ ಮಾಹಿತಿ ಕುರಿತು ಲೋಕಸಭೆಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳರವರು ಹೆದ್ದಾರಿ ಸಚಿವರಿಗೆ ಪ್ರಶ್ನೆ ಕೇಳಿದ್ದರು. ಈ ವಿಚಾರವಾಗಿ ಲೋಕಸಭೆಯಲ್ಲಿ ಉತ್ತರ ನೀಡಿರುವ ಹೆದ್ದಾರಿ ಸಚಿವರು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 7 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಉತ್ತರಿಸಿದ್ದಾರೆ.
ಅವುಗಳಲ್ಲಿ ರೂ.೧೧೬೭.೫೨ ಕೋಟಿ ಮೊತ್ತದ ಚಳ್ಳಕೆರೆ-ಹಿರಿಯೂರು ಮಧ್ಯದ ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಪಥಧ ಹೆದ್ದಾರಿಯನ್ನಾಗಿ ಮಾಡುವ ಕೆಲಸ ಶೇಕಡ ೯೫ ರಷ್ಟು ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ೧೭೩ ನ್ನು ಹೊಸದುರ್ಗ-ಹೊಳಲ್ಕೆರೆ ಭಾಗದಲ್ಲಿ ದ್ವಿಪಥ ಹೆದ್ದಾರಿಯನ್ನಾಗಿ ಮಾಡುವ ರೂ. ೧೦೯ ಕೋಟಿ ಮೊತ್ತದ ಕೆಲಸ ಶೇಕಡ ೯೨ ರಷ್ಟು ಪೂರ್ಣಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ೧೫೦-ಎ ಅನ್ನು ಹಿರಿಯೂರು-ಹುಳಿಯಾರು ಭಾಗದಲ್ಲಿ ದ್ವಿಪಥ ಹೆದ್ದಾರಿಯನ್ನಾಗಿ ಮಾಡುವ ರೂ.೧೦೭ ಕೋಟಿ ಮೊತ್ತದ ಕೆಲಸ ಶೇಕಡ ೯೭ ರಷ್ಟು ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ-೧೭೩ ರನ್ನು ಕಡೂರು-ಹೊಸದುರ್ಗ ಭಾಗದಲ್ಲಿ ದ್ವಿಪಥ ಹೆದ್ದಾರಿಯನ್ನಾಗಿ ಮಾಡುವ ರೂ.೧೮೪ ಕೋಟಿ ಮೊತ್ತದ ಕೆಲಸ ಶೇಕಡ ೧೩ ರಷ್ಟು ಪೂರ್ಣಗೊಂಡು ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಚಿತ್ರದುರ್ಗದಿಂದ ಶಿವಮೊಗ್ಗ ನಡುವೆ ದ್ವಿಪಥ ಹೆದ್ದಾರಿಯನ್ನಾಗಿ ಮಾಡಲು ಬಾಕಿ ಉಳಿದ ರೂ.೫೧೬ ಕೋಟಿ ಮೊತ್ತದ ಕೆಲಸದಲ್ಲಿ ಶೇಕಡ ೭೫ ರಷ್ಟು ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ -೬೯ ನ್ನು ಸಿರಾ ಪಟ್ಟಣದ ಹತ್ತಿರ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ರೂ.೫೮೪ ಕೋಟಿ ಅನುದಾನ ನೀಡಲಾಗಿತ್ತು ಇದು ಟೆಂಡರ್ ಹಂತದಲ್ಲಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.
ಉಳಿದಂತೆ ನಿಧಾನಗತಿಯಲ್ಲಿರುವ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಮತ್ತು ಯೋಜನೆಗೆ ವೇಗ ನೀಡಲು ಯಾವ ಕ್ರಮಗಳನ್ನು ತಗೆದುಕೊಳ್ಳಲಾಗಿದೆ ಎಂದು ಕೇಳಿದ ಸಂಸದರ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಈ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಭೂಸ್ವಾಧೀನ ಮತ್ತು ತೆರವುಗಳನ್ನು ಸುವ್ಯವಸ್ಥಿತಗೊಳಿಸುವುದು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರೊಂದಿಗೆ ನಿಕಟ ಸಮನ್ವಯತೆವ, ವಿವಾದ ಪರಿಹಾರ ಕಾರ್ಯವಿಧಾನವನ್ನು ನವೀಕರಿಸುವುದು, ಯೋಜನಾ ಅಭಿವರ್ಧಕರು, ರಾಜ್ಯ ಸರ್ಕಾರಗಳು ಮತ್ತು ವಿವಿಧ ಹಂತಗಳಲ್ಲಿ ಗುತ್ತಿಗೆದಾರರೊಂದಿಗೆ ಆಗಾಗ್ಗೆ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.