ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ MSIL ಸೂಪರ್‌ಮಾರ್ಕೆಟ್‌ಸ್ಥಾಪನೆಗೆ ಚಿಂತನೆ ಮಾಡಲಾಗಿದ್ದು ಈ ತಿಂಗಳಲ್ಲಿ ಸಾಧ್ಯಾಸಾಧ್ಯತೆ ವರದಿ ಕೊಡಲು ಸೂಚನೆ ನೀಡಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಪೊಲೀಸ್ ಮತ್ತು ಸೇನಾಕ್ಯಾಂಟೀನ್ ಮಾದರಿಯಲ್ಲೇ ರಾಜ್ಯ ಸರಕಾರಿ ನೌಕರರಿಗೆ ದಿನನಿತ್ಯದ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ವಸ್ತುವೂ ರಿಯಾಯಿತಿ ದರದಲ್ಲಿ ಸಿಗಬೇಕೆಂಬ ಉದ್ದೇಶದೊಂದಿಗೆ #MSIL ವತಿಯಿಂದ ಸೂಪರ್‌ಮಾರ್ಕೆಟ್‌ಆರಂಭಿಸುವ ಚಿಂತನೆ ಇದೆ.
ಈ ಸಂಬಂಧ ಖನಿಜ ಭವನದಲ್ಲಿ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮೊದಲ ಸುತ್ತಿನ ಚರ್ಚೆ ನಡೆಸಿದೆ. ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು ಹೇಗೆಂದು ಆರ್ಥಿಕ ಇಲಾಖೆಯ ಜತೆ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸೂಪರ್‌ಮಾರ್ಕೆಟ್‌ಮಳಿಗೆ ಆರಂಭಿಸುವ ಸಾಧ್ಯಾಸಾಧ್ಯತೆ ಕುರಿತು ಒಂದು ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ.
ಅಧ್ಯಯನದ ವರದಿ ಬಂದ ನಂತರ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆಗಳನ್ನು ತೆರೆಯುವ ಆಲೋಚನೆ ಇದೆ. ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸೌಲಭ್ಯ ವಿಸ್ತರಣೆಗೆ ಮುಂದಾಗಬಹುದು.
ಸೂಪರ್ ಮಾರ್ಕೆಟ್ ಸ್ಥಾಪನೆಯಿಂದ ಎಂಎಸ್‌ಐಎಲ್‌ಚಟುವಟಿಕೆಯೂ ವಿಸ್ತಾರಗೊಂಡು, ಆದಾಯ ವೃದ್ಧಿಯಾಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಗೂ ಅವಕಾಶವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಿ ನೌಕರರ ಸಂಘಟನೆಗಳ ಜತೆ ಮಾತುಕತೆ ನಡೆಸುವಂತೆಯೂ ಸೂಚಿಸಿರುವೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, MSIL ವ್ಯವಸ್ಥಾಪಕ ನಿರ್ದೇಶಕ ಮನೋಜ ಕುಮಾರ, MSIL ನಿರ್ದೇಶಕ ಚಂದ್ರಪ್ಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

