ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂದಿನ ದಿನಗಳಲ್ಲಿ ಎಂಎಸ್ಎಂಇ ಪ್ರತ್ಯೇಕ ಇಲಾಖೆ ರಚಿಸಿ, ಕಾರ್ಯದರ್ಶಿ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬೆಂಗಳೂರಿನ ಜ್ಞಾನಭಾರತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಅಮೃತ ಮಹೋತ್ಸವ‘ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಸ್ಥೆಯ ಬೇಡಿಕೆಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ ಸಭೆ ಕರೆದು, ತೀರ್ಮಾನಕ್ಕೆ ಬರಲಾಗುವುದು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉದ್ಯೋಗಗಳಿಗೆ ಅಭ್ಯರ್ಥಿಗಳಿಗನ್ನು ತರಬೇತಿ ನೀಡಿ ತಯಾರು ಮಾಡಬೇಕು. ಕೌಶಲ್ಯಾಭಿವೃದ್ಧಿ ಅತ್ಯಗತ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
1947 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಆರಾಧ್ಯ ಅವರು15 ಜನ ಸದಸ್ಯಯರನ್ನೊಳಗೊಂಡ ಈ ಸಂಸ್ಥೆಯನ್ನು ಸಣ್ಣ ಕೊಠಡಿಯೊಂದರಲ್ಲಿ ಪ್ರಾರಂಭಿಸಿದ್ದು, ಇಂದು 13 ಸಾವಿರ ಸದಸ್ಯರನ್ನು ಹೊಂದಿದೆ. ಸಂಘಟನೆಯ ದೃಷ್ಟಿಯಿಂದ ರಜತ, ಸುವರ್ಣ ಹಾಗೂ ಅಮೃತ ಮಹೋತ್ಸವ ಪ್ರಮುಖವಾದ ಮೈಲಿಗಲ್ಲುಗಳು. ಅಮೃತ ಮಹೋತ್ಸವ ಸಮಾರಂಭದಲ್ಲಿ ಕನಿಷ್ಠ ಒಂದು ಸಾವಿರ ಜನರಾದರೂ ಭಾಗವಹಿಸಬೇಕಿತ್ತು. ಸಂಸ್ಥೆಯ ಸದಸ್ಯತ್ವ ಒಂದು ಲಕ್ಷಕ್ಕೆ ಏರಲಿ ಎಂದು ಹಾರೈಸುತ್ತೇನೆ. ಎಂ.ಎಸ್.ಎಂ.ಇ ಗಳು ಬೆಳೆದಂತೆಲ್ಲ ರಾಜ್ಯದ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಿಎಂ ತಿಳಿಸಿದರು.
ಕಾಸಿಯಾ ಕೇವಲ ಉದ್ಯೋಗದಾತ ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿಯ ಪಾಲುದಾರ ಕೂಡ ಹೌದು. ರಾಜ್ಯದ ಅಭಿವೃದ್ಧಿಯಾದಂತೆ ತಲಾದಾಯ ಕೂಡ ಹೆಚ್ಚಾಗುತ್ತದೆ. ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ. 20 ಲಕ್ಷ ಕ್ಕೂ ಹೆಚ್ಚು ಎಂ.ಎಸ್.ಎಂ.ಇ ಗಳು ಸೇರಿ 185 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಜಿಸಲಾಗಿದೆ. ಇದು ಇನ್ನೂ ಹೆಚ್ಚಾಗಬೇಕೆಂದು ಬಯಸುತ್ತೇನೆ ಎಂದು ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 7 ಕೋಟಿ ಜನಸಂಖ್ಯೆ ಇದೆ. ಕೃಷಿ ಕ್ಷೇತ್ರವನ್ನು ಬಿಟ್ಟರೆ ಹೆಚ್ಚು ಉದ್ಯೋಗ ನೀಡುವುದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು. ಹಿಂದೆ ದಾಬಸ್‌ಪೇಟೆಯಲ್ಲಿ 400 ಎಕರೆ ಕಾಸಿಯಾದವರಿಗೆ ಮಂಜೂರು ಮಾಡಿಕೊಟ್ಟಿದ್ದೆ. ಮಾರುಕಟ್ಟೆ ದರದ ಅರ್ಧದಷ್ಟು ದರದಲ್ಲಿ ಇದನ್ನು ಮಂಜೂರು ಮಾಡಿದ್ದು, ಕೌಶಲ್ಯ ಅಭಿವೃದ್ಧಿ ನೀಡುವ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಸರ್ಕಾರ ಮೊದಲಿನಿಂದಲೂ ಕಾಸಿಯಾ ಸಂಸ್ಥೆಗೆ ಬೆಂಬಲ ನೀಡುತ್ತಾ ಬಂದಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕು. ಈ ಬಗ್ಗೆ ಆಸಕ್ತಿ ಮತ್ತು ಶಕ್ತಿ ಎರಡೂ ಇರಬೇಕು. ಕೌಶಲ್ಯ ಇಲ್ಲದವರಿಗೆ ತರಬೇತಿ ನೀಡಬೇಕು, ಆ ಮೂಲಕ ಅವರನ್ನು ಕೆಲಸಕ್ಕೆ ಯೋಗ್ಯರನ್ನಾಗಿಸಬೇಕು ಎಂದು ಅವರು ತಿಳಿಸಿದರು.
ದೇಶದಲ್ಲಿ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆಗೆ ಯತ್ನಿಸಲಾಗುತ್ತಿದೆ. ಕೈಗಾರಿಕೆಗಳ ಹೂಡಿಕೆಗೂ ಕಾನೂನು ಸುವ್ಯಸ್ಥೆಗೂ ನೇರವಾದ ಸಂಬಂಧವಿದೆ. ಆದ್ದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.