ಮುಡಾ ಪ್ರಕರಣ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರದ ಕೂಸು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರದಿಂದಾಗಿ ಮುಡಾ ಪ್ರಕರಣ ಬೆಳೆದಿದೆ. ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಸಂಸ್ಥೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಕ್ಲೀನ್ ಚಿಟ್ ನೀಡಿದ ವಿಚಾರವಾಗಿ ಸದಾಶಿವನಗರ ನಿವಾಸದ ಬಳಿ ಅವರು ಪ್ರತಿಕ್ರಿಯೆ ನೀಡಿ ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್​​ನವರು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿದಾಗಲೇ, ನಾನು ಏನು ಹೇಳಬೇಕೋ ಹೇಳಿದ್ದೆ. ಇದು ರಾಜಕೀಯ ಪ್ರೇರಿತ ಆರೋಪ. ಯಾವ ದಾಖಲೆಯಲ್ಲೂ ಸಿದ್ದರಾಮಯ್ಯ ಅವರ ಸಹಿ ಇಲ್ಲದಿರುವಾಗ, ಸಂಬಂಧವೇ ಇಲ್ಲದಿರುವಾಗ ಅವರ ಪಾತ್ರ ಹೇಗೆ ಬರುತ್ತದೆ? ಆಸ್ತಿ ಕಳೆದುಕೊಂಡವರು ಪರಿಹಾರ ಕೇಳುವುದು ಸಹಜ. ನಾವು ನೀವು ಕೂಡ ಕೇಳುತ್ತೇವೆ. ಮುಡಾದವರು ಕೊಟ್ಟಿದ್ದಾರೆ. ನಮಗೆ ಇಂತಹದೇ ಜಾಗದಲ್ಲಿ ನಿವೇಶನ ನೀಡಿ ಎಂದು ಅವರು ಎಲ್ಲಿಯೂ ಕೇಳಿಲ್ಲ ಎಂದು ಸಮರ್ಥಿಸಿಕೊಂಡರು.

ಅನಗತ್ಯ ಗೊಂದಲ ಬೇಡ ಎಂದು ಸಿದ್ದರಾಮಯ್ಯ ಅವರು ಈ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಯಾವುದೇ ಪ್ರಕರಣ ದಾಖಲಿಸುವಾಗ ಅದಕ್ಕೆ ಪೂರಕವಾದ ದಾಖಲೆ ಬೇಕು. ಲೋಕಾಯುಕ್ತ ಸಂಸ್ಥೆ ತನ್ನ ಕರ್ತವ್ಯ ಮಾಡಿದೆ. ಬಿಜೆಪಿಯವರು ತಮ್ಮ ಹೋರಾಟ ಮಾಡಿಕೊಳ್ಳಲಿ. ದೆಹಲಿಯಿಂದ ವಕೀಲರನ್ನು ಕರೆಸಿ ವಾದ ಮಂಡಿಸಲು ನಮಗೆ ಗೊತ್ತಿಲ್ಲವೇ? ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕುತಂತ್ರ. ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಡಿಕೆಶಿ ತಿರುಗೇಟು ನೀಡಿದರು.

ಲೋಕಾಯುಕ್ತ ಸಂಸ್ಥೆ ಸರ್ಕಾರದ ತಾಳಕ್ಕೆ ಕುಣಿದಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಸ್ಥಳೀಯ ಮಟ್ಟದ ಯಾವುದೇ ಸಂಸ್ಥೆಗಳನ್ನು ದುರ್ಬಲಗೊಳಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಇನ್ನು ಹೈಕೋರ್ಟ್ ಕೂಡ ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಎಂದು ಹೇಳಿದೆ. ಯಾರೇ ಸಿಎಂ ಆಗಿರಲಿ, ಬೊಮ್ಮಾಯಿ ಸಿಎಂ ಆಗಿರಲಿ, ಮುಖ್ಯಮಂತ್ರಿ ಹೇಳಿದಂತೆ ಲೋಕಾಯುಕ್ತ ಪೊಲೀಸರು ಕೇಳುತ್ತಾರಾ?. ಇಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪವಿಲ್ಲ ಎಂದು ಅವರು ತಿಳಿಸಿದರು.

ಅಧಿಕಾರಿ ನೇಮಿಸಬೇಕಾದರೂ ಲೋಕಾಯುಕ್ತರ ಅನುಮತಿ ಮೇರೆಗೆ ಕೆಲಸ ಮಾಡಲಾಗುವುದು. ಇಲ್ಲಿ ಕರ್ನಾಟಕದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೇ ಹೊರತು, ಹೊರ ರಾಜ್ಯದವರನ್ನು ಆಯ್ಕೆ ಮಾಡಲು ಬರುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

 

Share This Article
error: Content is protected !!
";