ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. 400 ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ನಿವೇಶನಗಳ ಅಕ್ರಮ ಹಂಚಿಕೆಯಿಂದಲೇ ಮುಡಾಕ್ಕೆ ಸುಮಾರು 500 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30 ರಿಂದ 40 ನಿವೇಶನ, ಮತ್ತೆ ಕೆಲವರಿಗೆ 10 ರಿಂದ 20 ನಿವೇಶನಗಳನ್ನು ಭೂ ಪರಿಹಾರದ ರೂಪದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಪತ್ತೆಯಾಗಿದೆ.
ಸರ್ಕಾರಿ ಆದೇಶಗಳನ್ನು ನೇರವಾಗಿ ಉಲ್ಲಂಘಿಸಿ, ನಕಲಿ ಮತ್ತು ಅಪೂರ್ಣ ದಾಖಲೆಗಳನ್ನು ಬಳಸಿ ಅನರ್ಹ ಫಲಾನುಭವಿಗಳಿಗೆ ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ.
ಇಷ್ಟೆಲ್ಲಾ ಅಕ್ರಮಗಳಿದ್ದರೂ ಸರ್ಕಾರ ಏನೂ ಆಗಿಲ್ಲ, ರಾಜಕೀಯ ಕಾರಣಕ್ಕಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಇದಕ್ಕೆಲ್ಲಾ ಹೊಣೆ ಯಾರು ಸಿದ್ದರಾಮಯ್ಯ ನವರೇ? ಮುಡಾದಲ್ಲಿ ಮುಕ್ಕಿ ತಿಂದಿರುವ ಭ್ರಷ್ಟರು ಜೈಲು ಸೇರುವುದು ಗ್ಯಾರಂಟಿ ಎಂದು ಬಿಜೆಪಿ ಭವಿಷ್ಯ ನುಡಿದಿದೆ.