ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಡಾ ಪ್ರಕರಣದ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಹೆಚ್ಚು ದಾಖಲೆಗಳನ್ನು ನೀಡುವಂತೆ ಮುಡಾ ಆಯುಕ್ತರಿಗೆ ಪತ್ರ ಬರೆದು ಸೂಚಿಸಿದೆ. ಹಿಂದಿನ ಆಯುಕ್ತರು ಕಾನೂನು ಉಲ್ಲಂಘನೆ ಮಾಡಿ ಮುಡಾ ಹಗರಣದಲ್ಲಿ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಇಡಿ ತನಿಖೆಗೆ ಮತ್ತಷ್ಟು ದಾಖಲೆ ನೀಡುವಂತೆ ಮೇ 9 ರಂದು ಮುಡಾ ಆಯುಕ್ತರಿಗೆ ಪತ್ರ ಬರೆದು ತಿಳಿಸಿದೆ.
ಅಭಿವೃದ್ಧಿಗೊಂಡಿರುವ ಬಡಾವಣೆಗಳಲ್ಲಿ ಶೇ.50:50 ಅನುಪಾತದಡಿ ಅನಧಿಕೃತವಾಗಿ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನಗಳನ್ನು ಮಂಜೂರು ಮಾಡಿರುವ ಆರೋಪ ಮುಡಾ ಅಧಿಕಾರಿಗಳ ಮೇಲಿದ್ದು ಅವರ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಹೆಚ್ಚುವರಿ ಮಾಹಿತಿ ನೀಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದೆ.
ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ವಿ.ಮುರಳಿ ಕಣ್ಣನ್‌ಅವರು ಈ ಸಂಬಂಧ ಮೇ 9 ರಂದು ಮುಡಾ ಆಯುಕ್ತರಿಗೆ ಪತ್ರ ಬರೆದು ದೇವನೂರು ಗ್ರಾಮದ ಸರ್ವೆ ನಂಬರೆ 81/2 ರಲ್ಲಿ 2 ಎಕರೆ 22 ಗುಂಟೆ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಸಂಬಂಧ ಭೂಮಾಲೀಕರಿಗೆ ನೀಡಿರುವ ಪರಿಹಾರದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಭೂಸ್ವಾದೀನಕ್ಕೆ ಅಧಿಸೂಚನೆ ಹೊರಡಿಸಿರುವ ಪ್ರತಿ, ಆ ಭೂಮಿಯ ಮಾಲೀಕರು ಯಾರು?, ಈ ಪ್ರಕರಣದಲ್ಲಿ ಹಂಚಿಕೆ ಮಾಡಲಾದ ಕಡತ ಸಲ್ಲಿಸುವಂತೆ ಇಡಿ ಸೂಚನೆ ನೀಡಿದೆ.
ಹೆಬ್ಬಾಳು ಗ್ರಾಮದ ಸರ್ವೆ ನಂ.88/2ರ 2ಎಕರೆ ಭೂಮಿಗೆ ಪರಿಹಾರ ನೀಡಿದ ಬಗ್ಗೆ ನೋಟಿಫಿಕೇಷನ್‌ಮಾಡಿದ್ದರೆ ಅದರ ಪ್ರತಿ ಅದರ ಮಾಲೀಕರು ಯಾರು ಹಂಚಿಕೆ ಕಡತವನ್ನು ಸಲ್ಲಿಸುವಂತೆಯೂ ಜಾರಿ ನಿರ್ದೇಶನಾಲಯವು ಮುಡಾ ಆಯುಕ್ತರಿಗೆ ಸೂಚನೆ ನೀಡಿದೆ.
ದಟ್ಟಗಳ್ಳಿ ಸರ್ವೆ ನಂಬರ್168,169, 176 ಮತ್ತು 183/1ರ ಭೂಮಿಗೆ ಪರಿಹಾರವಾಗಿ 28 ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ನಗರ ಯೋಜನಾ ಶಾಖೆಯ ಇಂಜಿನಿಯರಿಂಗ್‌ಶಾಖೆಗಳಿಂದ ವರದಿ ಅಭಿಪ್ರಾಯ ಪಡೆಯಲಾಗಿತ್ತೇ, ಪಡೆದಿದ್ದರೆ ಅದರ ಪ್ರತಿಯನ್ನೂ ಸಲ್ಲಿಸುವಂತೆಯೂ ಇಡಿ ಅಧಿಕಾರಿಗಳು ಮುಡಾ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ