ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ ನವರೇ, ಲೋಕಾಯುಕ್ತ ತನಿಖೆ ಬಗ್ಗೆ ನಿಮ್ಮ ಪರಮಾಪ್ತ ಸಚಿವ ಕೆ.ಎನ್.ರಾಜಣ್ಣ ಅವರು ಏನು ಹೇಳಿದ್ದಾರೆ ನೋಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
“ಯಾವುದೇ ಪ್ರಕರಣವನ್ನ ಲೋಕಾಯುಕ್ತ ತನಿಖೆಗೆ ಕೊಡುವುದೂ ಒಂದೇ, ಸ್ಮಶಾನಕ್ಕೆ ಹೋಗುವುದೂ ಒಂದೇ” ಎಂದು ಸರ್ಟಿಫಿಕೇಟ್ ಕೊಡುವ ಮೂಲಕ ಮುಡಾ ಹಗರಣವನ್ನ ತಾವು ಹೇಗೆ ಮುಚ್ಚಿಹಾಕಿ ಸತ್ಯವನ್ನ ಸಮಾಧಿ ಮಾಡಲು ಹೊರಟಿದ್ದೀರಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ ಎಂದು ಅಶೋಕ್ ಟೀಕಿಸಿದರು.
ಈಗಲಾದರೂ ಮುಡಾ ಹಗರಣವನ್ನ ಸಿಬಿಐಗೆ ವಹಿಸಿ ತನಿಖೆ ಎದುರಿಸಿ. ತಾವು ಸತ್ಯವಂತರಾಗಿದ್ದರೆ ಸಿಬಿಐ ತನಿಖೆ ಬಗ್ಗೆ ಭಯವೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.