ಚಂದ್ರವಳ್ಳಿ ನ್ಯೂಸ್, ಧಾರವಾಡ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜ.27ಕ್ಕೆ ಧಾರವಾಡ ಹೈಕೋರ್ಟ್ ಮುಂದೂಡಿ ಆದೇಶಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದ ವಿಚಾರಣೆ ಬೆಂಗಳೂರು ನ್ಯಾಯಾಲಯದಲ್ಲಿ ನಡೆದಿತ್ತು. ಮುಡಾ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿದೆ. ಆ ತನಿಖೆ ಪ್ರಮಾಣಿಕವಾಗಿ ಆಗಬೇಕೆಂದು ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆವು. ಲೋಕಾಯುಕ್ತ ರಾಜ್ಯ ಸರ್ಕಾರದ ಕೈ ಗೊಂಬೆಯಂತೆ ಕೆಲಸ ಮಾಡುತ್ತಿದೆ. ಹೀಗಾಗಿ ನಾವು ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೇಳಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದೆವು ಎಂದು ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತಕುಮಾರ ತಿಳಿಸಿದರು.
ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಮಣಿಂದರ್ ಸಿಂಗ್ ಅವರು ಸುದೀರ್ಘವಾಗಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಪೀಠ ಜ.27ಕ್ಕೆ ವಿಚಾರಣೆ ಮುಂದೂಡಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಮನು ಸಿಂಘ್ವಿ ವಿಡಿಯೋ ಕಾಲ್ ಮೂಲಕ ವಾದ ಮಂಡಿಸಿದರು.
ಕೋರ್ಟ್ ಒಳಗೆ ಹೋಗುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಈ ಸಂಬಂಧದ ಹಗರಣವನ್ನು ತನಿಖೆ ಮಾಡುವಂತೆ ದೂರು ದಾಖಲು ಮಾಡಿದ್ದೆ. ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಇದರಲ್ಲಿ ಭಾಗಿಯಾಗಿದೆ. ಲೋಕಾಯುಕ್ತ ಹಗರಣದ ಬಗ್ಗೆ ಸೂಕ್ತ ತನಿಖೆ ಆಗುವುದಿಲ್ಲ. ಹೀಗಾಗಿ ಹಗರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಕೇಳಿದ್ದೇನೆ ಎಂದು ತಿಳಿಸಿದ್ದಾರೆ.
ಜಡ್ಜ್ ಇಂದು ಧಾರವಾಡ ಪೀಠಕ್ಕೆ ಬಂದಿದ್ದಾರೆ. ಅರ್ಜಿ ಬಗ್ಗೆ ಸಾಕಷ್ಟು ವಿಚಾರಣೆ ಆಗಿದೆ. ಇವತ್ತು ಅಂತಿಮ ಆದೇಶ ಹೊರ ಬರುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ವಿಚಾರಣೆ ನಡೆಯಲಿದೆ. ನನ್ನ ಪರ ವಕೀಲರಾದ ಮಣಿಂದರ್ ಸಿಂಗ್ ಬಂದಿದ್ದಾರೆ. ಎಲ್ಲರೂ ಇಲ್ಲಿಗೆ ಬಂದಿದ್ದೇವೆ. ನ್ಯಾಯಾಲಯ ಮುಡಾ ಹಗರಣದ ತನಿಖೆಯನ್ನು ಸಿಬಿಐ ನೀಡುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದರು.

