ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಪರ ಕಾರ್ಯಕರ್ತರಿಗೆ, ಹೋರಾಟಗಾರರಿಗೆ ಭಾಷೆಯ ಬಗ್ಗೆ ಮತ್ತು ಸಾಹಿತ್ಯದ ಬಗ್ಗೆ ಅರಿವು ಬಹಳ ಮುಖ್ಯ. ಕನ್ನಡ ಭಾಷೆ ವಿಚಾರದಲ್ಲಿ ಭಾವನೆಗಳು ಎಷ್ಟು ಮುಖ್ಯವೋ ಭಾಷಾ ಜ್ಞಾನವೂ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಹೇಳಿದರು.
ತಾಲೂಕಿನ ಬೆಳವಂಗಲ ಹೋಬಳಿ ಹುಲುಕಡಿ ಬೆಟ್ಟದ ವೀರಭದ್ರಸ್ವಾಮಿ ಸಭಾ ಭವನದಲ್ಲಿ ಕನ್ನಡ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಪಕ್ಷದ ಕಾರ್ಯಕರ್ತರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುಕುಂದರಾಜ್, ಬೆಂಗಳೂರಿನಲ್ಲಿ ವಲಸಿಗರ ನಡುವಳಿಕೆಗಳು ಹಾಗೂ ಹೇಳಿಕೆಗಳಿಗೆ ತಕ್ಕ ಉತ್ತರವನ್ನು ನೀಡುವ ಚಾತಿಯನ್ನು ಎಲ್ಲಾ ಕನ್ನಡಿಗರೂ ಬೆಳೆಸಿಕೊಳ್ಳಬೇಕು. ಬಹು ಮುಖ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಲೇಖಕಿ ಬಾನು ಮುಷ್ತಕ್ ರವರ ಸಂಕಲನಕ್ಕೆ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಭಾಷೆಯ ಹಿರಿಮೆ ಗರಿಮೆ ಏನೆಂದು ಇಡೀ ಜಗತ್ತಿಗೆ ತೋರಿಸಿ ಕೊಟ್ಟಂತಾಗಿದೆ. ಹಾಗಾಗಿ ಕನ್ನಡದ ಬಗ್ಗೆ ಹೀಗೆಳೆ ಯುವವರಿಗೆ ನಮ್ಮ ಭಾಷೆಯ ಮಹತ್ವ ಏನೆಂದು ಗೊತ್ತಾಗಿದೆ ಎಂದು ಅಭಿಪ್ರಾಯ ಪಟ್ಟರು.
ಪತ್ರಕರ್ತ ಅದ್ದೆ ಮಂಜುನಾಥ್ ಮಾತನಾಡಿ ಕನ್ನಡಿಗರು ಎಲ್ಲರೊಂದಿಗೂ ನಂಟನ್ನು ಬೆಳೆಸಿಕೊಳ್ಳಬೇಕು. ಎಲ್ಲಾ ಸಂದರ್ಭಗಳಲ್ಲಿಯೂ ಹೋರಾಟಗಳನ್ನು ಭಾವನಾತ್ಮಕವಾಗಿ ಬಿಂಬಿಸಬಾರದು. ಹಾಗೆಂದು ಭಾಷಾ ವಿಚಾರಕ್ಕೆ ದಕ್ಕೆ ಬಂದಾಗ ಸುಮ್ಮನಿರಕೂಡದು. ಕನ್ನಡಕ್ಕೆ ಸಮಸ್ಯೆ ಎದುರಾದಾಗ ಮೂಲದಲ್ಲಿಯೇ ಗ್ರಹಿಸಿ ಅದನ್ನು ನಿವಾರಿಸುವ ಕೆಲಸ ಮಾಡಬೇಕಿದೆ. ಹೋರಾಟಗಳ ಮೂಲಕ ಬೀದಿಯಲ್ಲಿ ಬರೀ ಘೋಷಣೆ ಕೂಗಿದರೆ ಪ್ರಯೋಜನವಿಲ್ಲ.
ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋದಾಗ ಮಾತ್ರ ಚಳುವಳಿಗಳಿಗೆ ಸಾರ್ಥಕತೆ ಬರುತ್ತದೆ. ಪ್ರಸ್ತುತ ಕನ್ನಡ ಪರ ಕಾರ್ಯಕರ್ತರಲ್ಲಿ ಯುವಕರ ದಂಡೇ ಇದೆ. ಇದು ಸಂತಸ ಹಾಗೂ ಸ್ವಾಗತರ್ಹ ವಿಚಾರ. ಆದರೆ ಕನ್ನಡದ ಯುವ ಮನಸುಗಳನ್ನು ಸರಿಯಾದ ಮಾರ್ಗದರ್ಶನ ನೀಡಿ ಉತ್ತಮ ಮಾರ್ಗದಲ್ಲಿ ಕೋಂಡೊಯುವ ಕಾರ್ಯ ಕನ್ನಡ ಪರ ಸಂಘಟನೆಗಳಿಂದ ಅತೀ ಜರೂರಾಗಿ ಆಗಬೇಕಿದೆ ಎಂದು ಹೇಳಿದರು.
ಜಾಗೃತ ಕರ್ನಾಟಕ ಸಂಘಟನೆಯ ಸಂಚಾಲಕ ಬಿ. ಸಿ. ಬಸವರಾಜ್ ಮಾತನಾಡಿ ದೇಶದಲ್ಲಿ ನಿರುದ್ಯೋಗ ಅಪೌಷ್ಟಿಕತೆ ಹೆಚ್ಚುತ್ತಿದೆ. ದೇಶವನ್ನಾಳುವವರು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಗೊಳಿಸುತ್ತಿದ್ದಾರೆ. ರಾಜ್ಯಗಳ ಎಲ್ಲಾ ವಿಚಾರಗಳನ್ನು ಕೇಂದ್ರ ಸರ್ಕಾರವೇ ನಿರ್ಧರಿಸುವ ಮಟ್ಟಕ್ಕೆ ಬಂದು ರಾಜ್ಯಗಳ ನೆಲಮೂಲ ಆಶಯಗಳನ್ನು ಹಾಳು ಗೆಡುವುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ.
ಇವೆಲ್ಲಕ್ಕೂ ಮುಖ್ಯವಾಗಿ ಧರ್ಮದ ಅಮಲಿನಲ್ಲಿ ವಿವೇಕವನ್ನು ನೆಲಸಮ ಗೊಳಿಸಲಾಗುತ್ತಿರುವುದು ವಿಷಾದನೀಯ ಸಂಗತಿ. ದೇಶದ ಆರ್ಥಿಕ ಸ್ಥಿತಿಯ ಮಟ್ಟ ತಿಳಿದುಕೊಂಡರೆ ಇಡೀ ವಿಶ್ವದಲ್ಲಿ ಭಾರತ ನಾಲ್ಕನೇ ಬಲಾಡ್ಯ ರಾಷ್ಟ್ರ ಎಂಬುದು ಎಷ್ಟು ಸತ್ಯವೆಂಬುದು ಗೊತ್ತಾಗುತ್ತದೆ. ಧರ್ಮ ಹಾಗೂ ಜಾತಿಗಳ ಮದ್ಯೆ ಬೆಂಕಿ ಹಚ್ಚಿ ತಮ್ಮ ಸ್ವಹಿತವನ್ನು ಕಾಪಾಡಿಕೊಳ್ಳುವ ಮತಾಂದರ ಸಂಘಟನೆ ಹಾಗೂ ಪಕ್ಷಗಳನ್ನು ತೊಲಗಿಸಿದಾಗ ಮಾತ್ರ ಭಾರತ ಪ್ರಬುದ್ಧ ರಾಷ್ಟ್ರವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡಿಗರು ಇದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್, ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸದಸ್ಯ ಹುಲಿಕಲ್ ನಟರಾಜ್, ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ, ಕನ್ನಡ ಪರ ಚಿಂತಕ ಸಿ. ಕೆ. ರಾಮೇಗೌಡ, ರೈತ ಸಂಘದ ಹಿರಿಯ ಮಾರ್ಗದರ್ಶಕರಾದ ಸುಲೋಚನಮ್ಮ ವೆಂಕಟರೆಡ್ಡಿ, ಕನ್ನಡಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್ ಕ. ಜಾ. ಪ. ಅಧ್ಯಕ್ಷ ಕೆ. ವೆಂಕಟೇಶ್ ಪ್ರದಾನ ಕಾರ್ಯದರ್ಶಿ ಡಿ. ಪಿ. ಆಂಜನೇಯ ಸೇರಿದಂತೆ ಕನ್ನಡ, ದಲಿತ, ರೈತ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.