ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆಯ 2025-26 ನೇ ಸಾಲಿನ ಬಜೆಟ್ ತಯಾರಿಸಬೇಕಾಗಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಅಹವಾಲು, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳುವ ಸಲುವಾಗಿ ನವೆಂಬರ್-30 ರಂದು ಬೆಳಿಗ್ಗೆ 11 ಗಂಟೆ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು
ಸಾರ್ವಜನಿಕರು, ಹಿರಿಯ ನಾಗರೀಕರು, ಪತ್ರಕರ್ತರು, ಉದ್ಯಮಿಗಳು, ವರ್ತಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಮತ್ತಿತರ ವಲಯದ ಮುಖ್ಯಸ್ಥರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಹಿರಿಯೂರು ನಗರಸಭೆ ಲೆಕ್ಕಾಧಿಕ್ಷಕ ಗೋವಿಂದರಾಜ ಬಿ ಎಸ್, ಪೌರಾಯುಕ್ತ ವಾಸೀಂ ಅವರು ಕೋರಿಕೊಂಡಿದ್ದಾರೆ.
ನಗರಸಭೆಯಿಂದ ಸ್ಪಚ್ಛತೆ, ಬೀದಿ ದೀಪ, ಚರಂಡಿ, ಕುಡಿಯುವ ನೀರು ಪೂರೈಕೆ ಸೇರಿ ಎಲ್ಲ ಮೂಲ ಸೌಕರ್ಯ ಕಲ್ಪಿಸುವುದು, ರಸ್ತೆ ಬದಿಗಳಲ್ಲಿ ಮರಗಿಡಗಳನ್ನು ಬೆಳೆಸುವುವುದು, ಪರಿಸರ ಸಮತೋಲನ ಕಾಪಾಡುವುದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿವಿಧ ರೀತಿಯ ಸೌಕರ್ಯ ವಿತರಣೆ, ಶುದ್ಧ ಕುಡಿಯುವ ನೀರು ಪೂರೈಕೆ,
ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯದ ವ್ಯವಸ್ಥೆ, ಉದ್ಯಾನಗಳ ನಿರ್ಮಾಣ ಸೇರಿದಂತೆ ಮತ್ತಿತರ ವಿಚಾರಗಳ ಕುರಿತು ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.