ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು 2ನೇ ಅವಧಿಗೆ ಸಕಾಲದಲ್ಲಿ ರಾಜ್ಯ ಸರ್ಕಾರ ಪ್ರಕಟಿಸದೆ ವಿಳಂಬ ಮಾಡಿತ್ತು.
ಅಂದು ರಾಜ್ಯ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ ಸುಮಾರು 16 ತಿಂಗಳುಗಳ ಕಾಲ ಅಧಿಕಾರವಿಲ್ಲದೆ ವನವಾಸ ಅನುಭವಿಸಿದ್ದ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳು ಈಗ ವನವಾಸವಿದ್ದ ಅವಧಿಯ ಅಧಿಕಾರ ಅನುಭವಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ಗೆ ಮೊರೆ ಹೋಗಿ ನ್ಯಾಯ ಕೇಳುತ್ತಿದ್ದಾರೆ.
ರಾಜ್ಯದ 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 301 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲು ನಗಾರಭಿವೃದ್ದಿ ಇಲಾಖೆ ಎಡವಟ್ಟು ಮಾಡಿತ್ತು.
ಇದನ್ನೇ ಈಗ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರುಗಳು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹಾಲಿ ಚಾಲ್ತಿಯಲ್ಲಿರುವ ಸ್ಥಳೀಯ ಸಂಸ್ಥೆಗಳ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸದಸ್ಯರುಗಳ ಅಧಿಕಾರಾವಧಿ ಆರಂಭವಾಗಿದ್ದು ದಿನಾಂಕ-04-11-2020. ಮೊದಲ ಅವಧಿ(ಪ್ರಥಮ ಅಧಿವೇಶನ) ದಿನಾಂಕ-04-05-2023 ರಂದು ಮುಕ್ತಾಯವಾಗಿತ್ತು.
2ನೇ ಅಧಿವೇಶನದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸುವಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿತ್ತು. ಅಲ್ಲದೆ ಅನೇಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪುನರಾವರ್ತನೆ ಆಗಿತ್ತು. ಇದನ್ನ ಪ್ರಶ್ನಿಸಿ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ರಾಜ್ಯ ಸರ್ಕಾರ ತಾನು ನಿಗದಿ ಮಾಡಿದ್ದ ಮೀಸಲಾತಿ ಪಟ್ಟಿಯನ್ನು 2022ರ ಸೆಪ್ಟೆಂಬರ್‌ನಲ್ಲಿ ಪ್ರಮಾಣ ಪತ್ರದ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಪುನರಾವರ್ತನೆಗೆ ಅವಕಾಶ ಇಲ್ಲದಂತೆ ನಿಯಮನುಸಾರವೇ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸಲಾಗಿದೆ ಎಂದಿತ್ತು ಸರ್ಕಾರ.
ಈ ಎಲ್ಲ ಹಂತಗಳು ಪೂರ್ಣಗೊಳ್ಳುವ ತನಕ ಅಂದರೆ ದಿನಾಂಕ-05-05-2023 ರಿಂದ ದಿನಾಂಕ-18-ದ8-2024ರವರೆಗೆ ಅಡಳಿತಾಧಿಕಾರಿಗಳು ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಆಡಳಿತಾಧಿಕಾರಿಗಳು ಸುಮಾರು 16 ತಿಂಗಳ ಕಾಲ ಪ್ರಭಾರದಲ್ಲಿ ಅಧಿಕಾರ ನಡೆಸಿದ್ದರಿಂದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸದಸ್ಯರುಗಳು ಈ ಅವಧಿಯಲ್ಲಿ ಅಧಿಕಾರವಿಲ್ಲದೆ ಪರಿತಪಿಸಿದ್ದರು. ಹಲವು ಅಡೆ ತಡೆಗಳನ್ನು ಮೀರಿ ದಿನಾಂಕ-05-05-2023 ರಿಂದ 2ನೇ ಅಧಿಕಾರಾವಧಿ ಆರಂಭವಾಗಿತ್ತು. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸದಸ್ಯರುಗಳ ಅಧಿಕಾರಾವಧಿ ನವೆಂಬರ್-04, 2025ಕ್ಕೆ ಮುಕ್ತಾಯವಾಗಲಿದೆ.
ಆದ್ದರಿಂದ ಸುಮಾರು 16 ತಿಂಗಳುಗಳ ಕಾಲ ಅಧಿಕಾರವಿಲ್ಲದೆ ಹೊರಗಿದ್ದ ಅವಧಿಗೆ ಹಾಲಿ ಸದಸ್ಯರುಗಳನ್ನು ಮುಂದುವರೆಸುವಂತೆ ಹೈಕೋರ್ಟ್ ಗೆ ಮೊಗೆ ಹೋಗಿದ್ದಾರೆ.
ಈಗಾಗಲೇ ಉತ್ತರ ಕರ್ನಾಟಕದ ಕಲಬುರ್ಗಿ ಉಚ್ಚ ನ್ಯಾಯಾಲಯವು ಸುಮಾರು 10 ನಗರಸಭೆ, ಪುರಸಭೆಗಳ ಮನವಿ ಸ್ವೀಕರಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದರೆ, ಧಾರವಾಡದ ಉಚ್ಚ ನ್ಯಾಯಾಲಯವು ಸುಮಾರು 45 ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ತಡೆಯಾಜ್ಞೆ ನೀಡಿದೆ ಎನ್ನಲಾಗುತ್ತಿದೆ.

ಅಲ್ಲದೆ ಹಿರಿಯೂರು ನಗರಸಭೆ ಮಾಜಿ ಅಧ್ಯಕ್ಷ ಜೆ.ಆರ್.ಅಜೆಯ್ ಕುಮಾರ್ ಮತ್ತು ಇತರೆ ಸದಸ್ಯರುಗಳು ಬೆಂಗಳೂರಿನ ಹೌಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯನ್ನ ಸ್ವೀಕರಿಸಿರುವ ಹೈಕೋರ್ಟ್ ಇದೇ ಅಕ್ಟೋಬರ್-8ಕ್ಕೆ ವಿಚಾರ ನಿಗದಿ ಮಾಡಿದೆ. ಹಾಗಾಗಿ ಅಧಿಕಾರದಿಂದ ವಂಚಿತವಾಗಿದ್ದ 16 ತಿಂಗಳುಗಳ ಅಧಿಕಾರ ಅನುಭವಿಸಲು ಅವಕಾಶ ಸಿಗುವ ಸಾಧ್ಯತೆ ನಿಚ್ಚಳವಾಗಿದೆ ಎನ್ನುತ್ತಾರೆ ಸದಸ್ಯರುಗಳು.
“ಮೊದಲ ಅವಧಿಯ 30 ತಿಂಗಳ ಅವಧಿ ಮುಗಿದ ಮೇಲೆ ಉಳಿದ 2ನೇ ಅವಧಿಯ 30 ತಿಂಗಳಿಗೆ ನಾವು ಅಧಿಕಾರ ಮಾಡಬೇಕಿತ್ತು. ಆದರೆ ರಾಜ್ಯ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ 16 ತಿಂಗಳು ಅಧಿಕಾರವಿಲ್ಲದೆ ಹೊರಗಿದ್ದೇವು. ನಗರಸಭೆ ಆಡಳಿತ ಮಂಡಳಿ ರಚನೆಯಾಗಿರಲಿಲ್ಲ. ಸರ್ಕಾರ ಸದಸ್ಯರುಗಳ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡಿತ್ತು. ಆ ಅವಧಿಯಲ್ಲಿ ಯಾವುದೇ ಸಭೆಗಳು ನಡೆದಿರಲಿಲ್ಲ.
ಈ ಅವಧಿಯಲ್ಲಿ ಆಡಳಿತಾಧಿಕಾರಿಗಳು ಆಡಳಿತ ನಡೆಸಿದ್ದರು. ಈಗಾಗಲೇ ಇದರ ವಿರುದ್ಧ ರಾಜ್ಯದ ಧಾರವಾಡ ನ್ಯಾಯ ಪೀಠ ಮತ್ತು ಕಲಬುರ್ಗಿ ನ್ಯಾಯ ಪೀಠಗಳು ಹಲವು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ತಡೆಯಾಜ್ಞೆ ನೀಡಿವೆ.
ಇದನ್ನ ಆಧರಿಸಿ ನಾವುಗಳು ಕೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಅಧಿಕಾರದಿಂದ ವಂಚಿತವಾಗಿದ್ದ 16 ತಿಂಗಳು ಅಧಿಕಾರ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದೇವೆ. ನಮ್ಮ ಕೋರಿಕೆ ಅರ್ಜಿಯನ್ನು ನ್ಯಾಯ ಪೀಠ ಸ್ವೀಕರಿಸಿದ್ದು ಇದೇ ತಿಂಗಳು ಅಂದರೆ ಅಕ್ಟೋಬರ್-8ಕ್ಕೆ ವಿಚಾರಣೆಗೆ ಸಮಯ ನಿಗದಿ ಮಾಡಿದೆ. ಹಾಗಾಗಿ ನ್ಯಾಯಾಲಯದ ಅನುಮತಿ ದೊರೆಯುವ ಸಾಧ್ಯತೆ ದಟ್ಟವಾಗಿದೆ”.
ಜೆ.ಆರ್.ಅಜೆಯ್ ಕುಮಾರ್, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ನಗರಸಭೆ ಹಿರಿಯೂರು ಹಾಗೂ ಹೈಕೋರ್ಟ್ ಗೆ ಮನವಿ ಸಲ್ಲಿಸಿರುವ ಸದಸ್ಯರು.

