ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ನಗರಸಭೆ ಸದಸ್ಯರುಗಳ ಮಧ್ಯ ನಡೆದಿದ್ದ ಒಡಬಂಡಿಕೆಯಂತೆ ಹಿರಿಯೂರು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಅಲಿಯಾಸ್ ಅಜ್ಜಪ್ಪ ರಾಜೀನಾಮೆ ನೀಡದೆ ವಿಳಂಬ ಧೋರಣೆ ಅನುಸರಿಸಿದ್ದರಿಂದ ನಗರಸಭೆಯ ಮುಕ್ಕಾಲು ಭಾಗಕ್ಕೂ ಹೆಚ್ಚಿನ ಸದಸ್ಯರು ತಿರುಗಿ ಬಿದ್ದು ಅವಿಶ್ವಾಸ ಮಂಡನೆ ಮುಂದಾಗಿರುವುದು ಒಂದು ಕಡೆಯಾದರೆ ಇನ್ನೂ ಸುಧಾಕರ್ ಅಭಿಮಾನಿಗಳು ಮತ್ತು ನಗರಸಭೆ ಕೆಲ ಸದಸ್ಯರು ಅಜ್ಜಪ್ಪನವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಜರುಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ವಿರುದ್ಧ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ರವರು ಹೇಳಿಕೆ ನೀಡಿರುವುದನ್ನು ಕಾಡುಗೊಲ್ಲ ಸಮಾಜದ ಮುಖಂಡರು, ನಗರಸಭೆ ಸದಸ್ಯರು ಖಂಡಿಸಿದ್ದಾರೆ.
ಬಿಜೆಪಿ ಚಿಹ್ನೆ ಅಡಿಯಲ್ಲಿ ಗೆದ್ದ ಯಾವ ಸದಸ್ಯರನ್ನ ನಗರಸಭೆ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಸುಧಾಕರ್ ಯಾರ ಹತ್ತಿರ ಹೇಳಿದ್ದಾರೆ ಎನ್ನುವುದನ್ನು ಹಾಲಿ ಅಧ್ಯಕ್ಷ ಅಜ್ಜಪ್ಪ ಸಾಕ್ಷಿ ಸಮೇತ ಸಾಬೀತು ಪಡಿಸಬೇಕು. ಒಡಂಬಡಿಕೆಯಂತೆ ಗೌರವದಿಂದ ರಾಜೀನಾಮೆ ನೀಡಿ ಅಧಿಕಾರ ಬಿಟ್ಟು ಕೊಡುವ ಬದಲು ವಿನಾ ಕಾರಣ ಬಿಜೆಪಿ ಚಿಹ್ನೆಯಿಂದ ಗೆದ್ದವರನ್ನ ನಗರಸಭೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂದು ಸುಳ್ಳು ಹೇಳಿ ರಾಜೀನಾಮೆ ಕೊಡದೆ ಭಂಡ ನಿಲುವು ಪ್ರದರ್ಶಿಸಿರುತ್ತಾರೆ.
ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ-ಎ ಮೀಸಲಾತಿ ಬಂದಿದೆ. ಅದರಂತೆ ಮೀಸಲಾತಿ ಹೊಂದಿರುವ ಯಾವುದೇ ನಗರಸಭೆ ಸದಸ್ಯ ಅಧ್ಯಕ್ಷರಾಗಬಹುದಾಗಿದೆ. ಆ ನಿಟ್ಟಿನಲ್ಲಿ ಯೋಚಿಸುವುದಾದರೆ ಬಿಸಿಎಂ-ಎ ಮೀಸಲಾತಿಗೆ ಬರುವಂತ ಅರ್ಹತೆ ಇರುವ 5 ಜನ ಆಕಾಂಕ್ಷಿಗಳಿದ್ದಾರೆ.
ಆ ಪೈಕಿ ಗೊಲ್ಲ ಸಮಾಜದ ಒಬ್ಬರು, ಮುಸ್ಲಿಂರು ಮೂವರು ಸದಸ್ಯರು ಹಾಗೂ ಆಚಾರ್ ಸಮಾಜಕ್ಕೆ ಸೇರಿದ ಒಬ್ಬರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ 3 ಜನ ಕಾಂಗ್ರೆಸ್ ಸದಸ್ಯರಾದರೆ ಒಬ್ಬರು ಪಕ್ಷೇತರರು, ಮತ್ತೊಬ್ಬರು ಬಿಜೆಪಿ ಚಿಹ್ನೆಯಿಂದ ನಗರಸಭೆಗೆ ಆಯ್ಕೆ ಯಾಗಿದ್ದಾರೆ.
ಈ ಐದು ಮಂದಿಗೂ ಅಧ್ಯಕ್ಷರಾಗುವ ಹಂಬಲವಿದೆ. ಅಧ್ಯಕ್ಷ ಅಜ್ಜಪ್ಪನವರು ಸಚಿವರ ಮೇಲೆ ಆರೋಪ ಮಾಡುವುದು, ಸುಳ್ಳು ಸುದ್ದಿ ಹಬ್ಬಿಸುವುದನ್ನ ಕೂಡಲೇ ನಿಲ್ಲಿಸಬೇಕು ಎಂದು ನಗರಸಭಾ ಸದಸ್ಯ ಚಿತ್ರಜಿತ್ ಯಾದವ್ ಎಚ್ಚರಿಸಿದ್ದಾರೆ.
“ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಸಾಮಾಜಿಕ ನ್ಯಾಯದಡಿ ಬೇರೆ ಜಾತಿಯವರಿಗೆ ನಗರಸಭಾ ಅಧ್ಯಕ್ಷ ಸ್ಥಾನ ನೀಡಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಾಲಿ ಅಧ್ಯಕ್ಷ ಅಜಯ್ ಕುಮಾರ್ ರವರಿಗೆ 5 ತಿಂಗಳ ಮಟ್ಟಿಗೆ ಅಧ್ಯಕ್ಷರಾಗಲು ಸೂಚಿಸಿ ಅವಿರೋಧ ಆಯ್ಕೆ ಮಾಡಿಸಿದ್ದರು. ಅಂದು ಕೂಡಾ ಇಷ್ಟೇ ಮಂದಿ ಆಕಾಂಕ್ಷಿಗಳಿದ್ದರೂ ಸಚಿವರು ಸೂಚನೆ ನೀಡಿದ್ದರಿಂದ ಅಜ್ಜಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಗಿತ್ತು.
ಈ ಹಿಂದೆ ನಡೆದಿರುವ ಒಡಂಬಡಿಕೆಯನ್ನು ಅಜ್ಜಪ್ಪ ಅವರು ಮರೆತಂತೆ ಕಾಣುತ್ತಿದೆ. ಈಗ ಅಧಿಕಾರ ಬಿಟ್ಟು ಕೊಡುವ ಸಂದರ್ಭದಲ್ಲಿ ನಾನು ರಸ್ತೆ ಅಗಲೀಕರಣ ಮಾಡುತ್ತೇನೆ, ಅಭಿವೃದ್ಧಿ ಮಾಡುತ್ತೇನೆ ಎಂದು ಅಧ್ಯಕ್ಷ ಅಜ್ಜಪ್ಪನವರು ಭಂಡ ತನ ತೋರಿಸುತ್ತಿದ್ದಾರೆ”.
ಚಿತ್ರಜಿತ್ ಯಾದವ್, ನಗರಸಭಾ ಸದಸ್ಯರು, ಹಿರಿಯೂರು.
“ಅಜ್ಜಪ್ಪನವರು ಅಧ್ಯಕ್ಷರಾಗಿ ಮುಂದುವರೆಯುವ ದುರಾಸೆಯಿಂದ ಸಚಿವ ಸುಧಾಕರ್ ಬಗ್ಗೆ ಅಪಪ್ರಚಾರ ಮಾಡಿದರೆ ಕಾಂಗ್ರೆಸ್ ಕಾರ್ಯಕರ್ತರು ಸಹಿಸುವುದಿಲ್ಲ. ಅಧಿಕಾರ ಬರುತ್ತೇ ಹೋಗುತ್ತೇ. ಆದರೆ ಕೊಟ್ಟ ಮಾತಿನಂತೆ ವಚನ ಭ್ರಷ್ಟರಾದರೆ ಕೊನೆ ತನಕ ಕಟ್ಟ ಸಂದೇಶ ಉಳಿಯುತ್ತದೆ ಎನ್ನುವ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಿಗೂ ಇರಬೇಕು.
ಹಿರಿಯೂರು ನಗರದಲ್ಲಿ ರಸ್ತೆ ಅಗಲೀಕರಣ ಈ ಮುಂಚೆ ವೇದಾವತಿ ಕಾಲೇಜಿನಿಂದ ತುಳಸಿ ಕಲ್ಯಾಣ ಮಂಟಪದವರೆಗೆ ಆಗಿತ್ತು. ಆಗ ಅಜಯ್ ಕುಮಾರ್ ಅಧ್ಯಕ್ಷರಾಗಿರಲಿಲ್ಲ ಆದರೂ ಕಾಮಗಾರಿ ಆಗಿತ್ತು. ಮುಂದುವರೆದ ಕಾಮಗಾರಿಯನ್ನು ಸಚಿವ ಡಿ ಸುಧಾಕರ್ ಅವರು ಮಾಡಿಸಿಯೇ ತೀರುತ್ತಾರೆ. ಹಿರಿಯೂರಿನ ಅಭಿವೃದ್ದಿಗಾಗಿ ಸಚಿವರು ಹಗಲಿರುಳು ಶ್ರಮ ವಹಿಸಿ ದುಡಿತ್ತಿದ್ದಾರೆ. ರಸ್ತೆ ಅಗಲೀಕರಣಕ್ಕೂ ನಗರಸಭಾ ಅಧ್ಯಕ್ಷ ಅಜಯ್ ಕುಮಾರ್ ಗೂ ಯಾವುದೇ ಸಂಬಂಧವಿಲ್ಲ.
ನಗರಸಭಾ ಅಧ್ಯಕ್ಷರ ರಾಜೀನಾಮೆ ವಿಷಯದಲ್ಲಿ ಸರ್ವ ಜನಾಂಗದವರಿಗೂ ನ್ಯಾಯ ಸಿಗಬೇಕೆಂಬುದು ಸುಧಾಕರ್ ಅವರ ನಿಲುವು ಮತ್ತು ಬದ್ಧತೆ ಆಗಿದೆ”.
ಜೆ.ಜಿ.ಹಳ್ಳಿ ಕೇಶವ, ಕಾಂಗ್ರೆಸ್ ಪಕ್ಷ.
“ದಂಡಿಗೆ ಹೆದರಿಲ್ಲ ದಾಳಿಗೆ ಹೆದರಿಲ್ಲ, ಇನ್ನೂ ಅಜ್ಜಪ್ಪ ಮಾಡೋ ಗೊಡ್ಡು ಆರೋಪಗಳಿಗೆ ಸಚಿವ ಸುಧಾಕರ್ ಹೆದರುವುದಿಲ್ಲ. ಇಂತಹ ಗೊಡ್ಡು ಆರೋಪ ಮತ್ತು ಅಪಪ್ರಚಾರದ ನಡುವೆಯು 2023 ರ ಚುನಾವಣೆಯಲ್ಲಿ 30 ಸಾವಿರ ಲೀಡ್ ಪಡೆದು ಗೆದ್ದಿದ್ದಾರೆ ಎನ್ನುವ ವಿಚಾರದ ಅರಿವು ಎಲ್ಲರಿಗೂ ಇರಬೇಕು. ನಾವು ಸುಧಾಕರ್ ಬೆಂಬಲಕ್ಕೆ ಇದ್ದೇವೆ, ಸುಧಾಕರ್ ಅವರ ತೀರ್ಮಾನವೇ ಅಂತಿಮ”.
ಪಾಲಾಕ್ಷ ಯಾದವ್, ಕಾತ್ರಿಕೇನಹಳ್ಳಿ, ಗೊಲ್ಲ ಜನಾಂಗದ ಮುಖಂಡ.