ಹಿರಿಯೂರು ಶಕ್ತಿ ಗಣಪತಿಯ ಭಾವನಾತ್ಮಕ ವಿಸರ್ಜನೆ, ಗಮನ ಸೆಳೆದ ಕಲಾ ತಂಡಗಳ ಪ್ರದರ್ಶನ
ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಕಡ್ಲೆಕಾಯಿ ಮಂಡಿಯ ನೆಹರು ಮೈದಾನದಲ್ಲಿ ಕಳೆದ ಐವತ್ತೇರಡು ವರ್ಷಗಳಿಂದ ಪ್ರತಿಷ್ಠಾಪಿಸಲ್ಪಡುವ ಶ್ರೀಶಕ್ತಿ ಗಣಪತಿಯ ವಿಸರ್ಜನೆಯು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷ ಶಕ್ತಿ ಗಣಪತಿ ಪೂಜಾ ಸಮಿತಿ ಆಯೋಜಿಸುತ್ತಿದ್ದ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಈ ಸಾರಿ ನಗರಸಭೆ ಸಾಥ್ ನೀಡಿದ ಪರಿಣಾಮ ವಿಶೇಷ ರೀತಿಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ನಾಸಿಕ್ ಡೊಳ್ಳು ಕುಣಿತ, ವೀರಗಾಸೆ, ಡೊಳ್ಳು ಕುಣಿತ, ತಮಟೆವಾಧ್ಯ ಸೇರಿದಂತೆ ವಿವಿಧ ರೀತಿಯ ಹಲವು ಕಲಾ ತಂಡಗಳ ಪ್ರದರ್ಶನ ಜನಮನ ಸೆಳೆದವು.
ಶಕ್ತಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಭಕ್ತ ಅಭಿಮಾನಿಗಳು ಒಂದೆಡೆಯಾದರೆ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಅವರು ಅತ್ಯಂತ ಉತ್ಸಾಹದೊಂದಿಗೆ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಅಲ್ಲದೆ ಅಭಿಮಾನಿಗಳೊಂದಿಗೆ ಅವರು ಡಿಜೆಯ ಹಾಡಿಗೆ ಮಾಡಿದ ನೃತ್ಯ, ಹಾಕಿದ ಹೆಜ್ಜೆಗಳು ಜನರನ್ನ ಆಕರ್ಷಿಸಿದವು. ರಂಗು ರಂಗಿನ ಶಾಲು, ರುಮಾಲುಗಳು, ಕನ್ನಡ ಬಾವುಟಗಳ ಹಾರಾಟ ನೋಡುಗರ ಗಮನ ಸೆಳೆದವು.
ಶಾಲಾ ಕಾಲೇಜುಗಳಿಗೆ ರಜೆ ದಿನಗಳಾಗಿರುವ ಕಾರಣದಿಂದ ಯುವಕರು ಯುವತಿಯರು, ಶಾಲಾ ಕಾಲೇಜ್ ಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ ಡಿಜೆಯಿಂದ ಹೊರ ಹೊಮ್ಮುತ್ತಿದ್ದ ನಾದ ಸ್ವರಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಹಿರಿಯೂರು ನಗರದ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಶಕ್ತಿ ಗಣಪತಿಯ ಭವ್ಯ ಮೆರವಣಿಗೆ ಹಲವು ಆಕರ್ಷಕ ನೃತ್ಯಗಳೊಂದಿಗೆ ಸಾಗಿತು.
ಭವ್ಯ ಮೆರವಣಿಗೆ: ಶ್ರೀ ಶಕ್ತಿ ಗಣಪತಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳೊಂದಿಗೆ ನಗರದ ನೆಹರು ಮೈದಾನದಿಂದ ಹೊರಟು ಗಾಂಧಿ ವೃತ್ತ, ಆಸ್ಪತ್ರೆ ಸರ್ಕಲ್, ಸಾರಿಗೆ ಬಸ್ ನಿಲ್ದಾಣ, ರಂಜಿತಾ ಹೋಟಲ್, ಮತ್ತೆ ಪ್ರಧಾನ ರಸ್ತೆ ಮೂಲಕ ಚರ್ಚ್ ರಸ್ತೆ, ಹುಳಿಯಾರ್ ರಸ್ತೆ, ಮೂಲಕ ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನೇರವಾಗಿ ಪ್ರೆಸ್ಸಿಡೆನ್ಸಿ ಶಾಲೆಯ ಸಮೀಪದ ಪಾಂಡುರಂಗಪ್ಪನವರ ತೋಟದ ಬಾವಿಯಲ್ಲಿ ಶ್ರೀ ಶಕ್ತಿ ಗಣಪತಿಯನ್ನು ಸಾವಿರಾರು ಅಭಿಮಾನಿ ಭಕ್ತರ ಸಮ್ಮುಖದಲ್ಲಿ ವಿಸರ್ಜನೆ ಮಾಡಲಾಯಿತು.
ಉತ್ತಮ ಮಳೆ, ಬೆಳೆಯಾಗಲಿ ಎಂದು ವಿಘ್ನ ನಿವಾರಕನಿಗೆ ಬೇಡಿಕೆ ಇಟ್ಟ ಸಚಿವರು-
“ಹಿರಿಯೂರು ನಗರದ ಶಕ್ತಿ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಿ.ಸುಧಾಕರ್ ಅವರು ಭಾಗವಹಿಸಿ ಮಹಾಮಂಗಳಾರತಿ ಪಡೆದು ಕೊಂಡರು. ಹಿರಿಯೂರು ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸಲಿ, ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ಶ್ರೀ ಶಕ್ತಿ ಗಣಪತಿಯಲ್ಲಿ ಪ್ರಾರ್ಥಿಸಿ ಆಶೀರ್ವಾದ ಪಡೆದರು”.
ಶ್ರೀ ಶಕ್ತ ಗಣಪತಿ ಪೂಜೆ ಸಮಿತಿ ಅಧ್ಯಕ್ಷ ಪ್ರಕಾಶ್, ಶ್ರೀ ಶಕ್ತಿ ಗಣಪತಿ ಉಸ್ತುವಾರಿ ಹಾಗೂ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ನಗರಸಭೆ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಶಿವರಂಜನಿ ಯಾದವ್, ಅನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್ ನಾಗೇಂದ್ರ ನಾಯ್ಕ್, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್,
ಕಾಂಗ್ರೆಸ್ ಬ್ಲಾಕ್ ನಗರ ಅಧ್ಯಕ್ಷ ಜೆ ಖಾದಿ ರಮೇಶ್, ಕಾಂಗ್ರೆಸ್ ಮುಖಂಡರಾದ ಕಂದಿಕೆರೆ ಸುರೇಶ್ ಬಾಬು, ಪಿಟ್ಲಾಲಿ ರವಿ, ರಂಗೇನಹಳ್ಳಿ ಗೋವಿಂದ್ ರಾಜ್, ನಗರಸಭೆ ಮಾಜಿ ಸದಸ್ಯ ರವಿಚಂದ್ರ ನಾಯ್ಕ, ಶಿವಕುಮಾರ್, ತಿಪ್ಪೇಸಾಮಿ, ಮಂಜುನಾಥ್, ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿ ಸದಸ್ಯರು ಹಾಗೂ ನಗರಸಭೆ ಸದಸ್ಯರು ಭಕ್ತಾದಿಗಳು ಸಾರ್ವಜನಿಕರು ಭಾಗವಹಿಸಿದ್ದರು.