ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮುಕ್ತಿಧಾಮ ಚಿತಾಗಾರದಿಂದ ಸ್ವಲ್ಪ ಮುಂದೆ ಕೋಟೆಗೆ ಸೇರಿದ ಒನ್ನೆ ಬಾಗಿಲಿನ ಜಾಗಕ್ಕೆ ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್, ಭಾಸ್ಕರ್ ಇವರುಗಳು ಕಾಂಪೌಂಡ್ ಹಾಕಿ ಕಬಳಿಸಿದ್ದಾರೆಂದು ನಗರಸಭೆ ಸದಸ್ಯ ದೀಪು ಆಪಾದಿಸಿದರು.
ಕೋಟೆಗೆ ಸೇರಿದ ಜಾಗ ಒತ್ತುವರಿ ಮಾಡಿರುವ ಸ್ಥಳದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಲ್ಕು ಎಕರೆಗೂ ಹೆಚ್ಚಿನ ಪುರಾತತ್ವ ಇಲಾಖೆಗೆ ಸೇರಿದ ಕೋಟೆ ಜಾಗವನ್ನು ಶ್ರೀನಿವಾಸ್ ಅವರ ಸಹೋದರ ರಾಮಮೂರ್ತಿ ಹೆಸರಿಗೆ ಮಾಡಿಸಿಕೊಟ್ಟಿದ್ದಾರೆ.
ಶ್ರೀನಿವಾಸ್ ಹಾಗೂ ಭಾಸ್ಕರ್ ಇವರುಗಳಿಗೆ ಮುಂದೆ ನಿಂತು ಕಾಂಪೌಂಡ್ ನಿರ್ಮಿಸಿ ಕೋಟೆ ಜಾಗ ನುಂಗು ನೀರು ಕುಡಿಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ ನಗರಸಭೆ ಜಾಗವನ್ನು ಕಬಳಿಸಲು ಹೊರಟಿದ್ದೇನೆಂದು ನನ್ನ ಮೇಲೆ ಆರೋಪಿಸುವ ಇವರಿಗೆ ನೈತಿಕತೆಯಿಲ್ಲ ಎಂದು ಹರಿಹಾಯ್ದರು.
ಕೋಟೆ ಜಾಗ ಒತ್ತುವರಿ ಮಾಡಿಕೊಂಡಿರುವ ಇವರುಗಳ ವಿರುದ್ದ ಲೋಕಾಯುಕ್ತರು, ಜನಪ್ರತಿನಿಧಿಗಳ ನ್ಯಾಯಾಲಯ, ಪುರಾತತ್ವ ಇಲಾಖೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ದೂರು ಕೊಡುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದರು.
ಪುರಾತತ್ವ ಇಲಾಖೆ ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ ಕೋಟೆ ಮುಂಭಾಗ ಬೃಹತ್ ಕಟ್ಟಡಗಳನ್ನು ಕಟ್ಟಿಕೊಂಡು ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಶ್ರೀನಿವಾಸ್ ಮತ್ತು ಭಾಸ್ಕರ್ ಇವರುಗಳು ನಗರಸಭೆಯಿಂದ ಕಟ್ಟಡ ನಿರ್ಮಿಸಲು ಯಾವುದೇ ಪರವಾನಗಿ ಪಡೆದಿಲ್ಲ, ಒಂದು ರೂಪಾಯಿ ಕಂದಾಯ ಪಾವತಿಸುತ್ತಿಲ್ಲ.
ಕಟ್ಟಡ ಕಟ್ಟುವಾಗಲೂ ನಗರಸಭೆಯಿಂದ ಲೈಸೆನ್ಸ್ ಪಡೆದಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟೆ ಜಾಗವನ್ನು ಈಗ ಒತ್ತುವರಿ ಮಾಡಿದ್ದಾರೆ. ಪುರಾತತ್ವ ಇಲಾಖೆಯ ನಿಯಮ ಉಲ್ಲಂಘಿಸಿ ಕೋಟೆ ಎದುರುಗಡೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ.
ಕೋಟೆ ಜಾಗ ಒತ್ತುವರಿಯಾಗಿರುವುದನ್ನು ಉಳಿಸುವುದಕ್ಕಾಗಿ ಈಗಿನಿಂದ ನಮ್ಮ ಹೋರಾಟ ಶುರುವಾಗಲಿದೆ, ಕೋಟೆ ಆಸ್ತಿ ಅತಿಕ್ರಮಣ ಮಾಡಿರುವ ಇವರುಗಳ ವಿರುದ್ಧ ವಾಲ್ಮೀಕಿ ಸ್ವಾಮೀಜಿಗಳು ಸೇರಿದಂತೆ ಸಮಾಜದ ಹಿರಿಯರೊಂದಿಗೆ ಚರ್ಚಿಸಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುತ್ತದೆ ಎಂದು ದೀಪು ಹೇಳಿದರಲ್ಲದೆ ತಮ್ಮ ಮೇಲೆ ಆಪಾದನೆ ಮಾಡಿರುವವರಿಗೆ ಹೋರಾಟದ ಮೂಲಕ ಉತ್ತರ ನೀಡುವೆ ಎಂದು ಅವರು ತಿರುಗೇಟು ನೀಡಿದರು.
ಪ್ರತಿ ಕ್ಷಣಕ್ಕೂ ಮಾಜಿ ನಗರಸಭೆ ಅಧ್ಯಕ್ಷರು ಅಕ್ರಮ ಎಸಗಿದ್ದಾರೆ. ಆಸ್ತಿ ಪರಬಾರೆ ಮಾಡುತ್ತಿದ್ದಾರೆ ಎಂದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ಶ್ರೀನಿವಾಸ್ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಯಾರು ಮಾಜಿ ನಗರಸಭೆ ಅಧ್ಯಕ್ಷರು ಎಂದು ಹೆಸರು ಘೋಷಣೆ ಮಾಡಲಿ, ಯಾವ್ಯಾವ ಆಸ್ತಿ ಪರಬಾರೆ ಮಾಡಿದ್ದಾರೆಂದು ದಾಖಲಿ ಬಿಡುಗಡೆ ಮಾಡಲು ಎಂದು ಅವರು ಸವಾಲ್ ಹಾಕಿದರು.
ನಗರಸಭಾ ಸದಸ್ಯರಾದ ಶ್ರೀನಿವಾಸ್ ಮತ್ತು ಭಾಸ್ಕರ್ ಅವರುಗಳು ನಾವು ಯಾವುದೇ ಭ್ರಷ್ಟಾಚಾರ ಎಸಗಿಲ್ಲ, ನಾವು ಪರಿಶುದ್ಧರು, ಯಾರನ್ನೂ ಹೆದರಿಸಿ ಬೆದರಿಸಿ ಆಸ್ತಿ ಮಾಡಿಲ್ಲ, ಕಾನೂನು ಉಲ್ಲಂಘಿಸಿಲ್ಲ, ಬಹಳ ನಿಯತ್ತಾಗಿದ್ದೇವೆಂದು ಉಚ್ಚಂಗಿಯಲ್ಲಮ್ಮ ದೇವಸ್ಥಾನದಲ್ಲಿ ಬಂದು ಪ್ರಮಾಣ ಮಾಡಲಿ, ನಾವು ಇವರ ವಿರುದ್ಧ ಪ್ರಮಾಣ ಮಾಡುತ್ತೇನೆ ಅಷ್ಟೇ ಅಲ್ಲ ನಾನು ನಗರದ ಯಾವುದೇ ಆಸ್ತಿಯನ್ನು ಕಬಳಿಸಿಲ್ಲ, ಯಾರನ್ನೂ ಹೆದರಿಸಿ ಬೆದರಿಸಿ ಆಸ್ತಿ ಮಾಡಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡುತ್ತೇನೆ ಇವರು ಬಂದ ಪ್ರಮಾಣ ಮಾಡಲಿ. ಅವರು ಹೇಳುವಂತ ದೇವಸ್ಥಾನದಲ್ಲೇ ನಾನು ಪ್ರಮಾಣ ಮಾಡುವೆ ಅವರು ಬಂದು ಪ್ರಮಾಣ ಮಾಡಲಿ ಎಂದು ದೀಪು ಸವಾಲ್ ಹಾಕಿದರು.
ನಗರಸಭೆ ಆಸ್ತಿ ಉಳಿಸಲು ನಾವು ಆಂದೋಲನ ಮಾಡುತ್ತೇವೆಂದು ಪತ್ರಿಕಾ ಹೇಳಿಕೆ ನೀಡಿರುವ ಇವರುಗಳು ನಾನೇ ಮುಂದೆ ನಿಂತು ಕೈಜೋಡಿಸುತ್ತೇನೆ. ಇವರು ಆದಿಶಕ್ತಿ ನಗರದಲ್ಲಿ ಹಾಕಿಸಿರುವ ಶೆಡ್ ತೆರವು ಮಾಡಲಿ, ಸೋಮವಾರ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ ತನಕ ಇವರಿಗಾಗಿ ಕಾಯುವೆ, ಬಂದು ಆ ಶೆಡ್ ತೆರವುಗೊಳಿಸಲಿ ಹಾಗೇ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಇವರ ಸ್ನೇಹಿತರು ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಬೃಹತ್ ಕಟ್ಟಡ ನಿರ್ಮಿಸಿ ಬಾಡಿಗೆ ಕೊಟ್ಟಿದ್ದಾರೆ ಅದನ್ನೂ ತೆರವುಗೊಳಿಸಲಿ ಎಂದು ದೀಪು ಸವಾಲ್ ಹಾಕಿದರು.
ಆರಂಭದಲ್ಲಿ ನಗರಸಭೆ ಆಸ್ತಿ ಉಳಿಸುತ್ತೇವೆಂದು ಹೇಳಿ ಬೇಲಿ ಹಾಕಿಸಿ ನಂತರ ಇವರ ಹೆಸರಿಗೆ ಖಾತೆ ಮಾಡಿಕೊಳ್ಳುವ ಹುನ್ನಾರವನ್ನು ಸದಸ್ಯರಾದ ಶ್ರೀನಿವಾಸ್ ಮಾಡುತ್ತಿದ್ದಾರೆಂದು ವಾಗ್ದಾಳಿ ಮಾಡಿದರು. ನಗರಸಭೆ ಮಾಜಿ ಸದಸ್ಯ ವಿಜಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.