ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡು, ಜೋಗಿಮಟ್ಟಿ ಪ್ರಕೃತಿ ಧಾಮದ ಹಿರಿಮೆ ಹೊಂದಿರುವ ಚಿತ್ರದುರ್ಗ ನಗರದ ಬಡಾವಣೆ ಒಂದರಲ್ಲಿನ ಒಳ ಚರಂಡಿ ಸಂಪೂರ್ಣವಾಗಿ ಕಟ್ಟಿಕೊಂಡು ರಸ್ತೆಗೆ ಗಲೀಜು ನೀರು ಉಕ್ಕಿ ಹರಿದಿದೆ. ಪರಿಸ್ಥಿತಿ ಹದಗೆಟ್ಟು ಹೋಗಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಒಳಚರಂಡಿ ಕಟ್ಟಿಕೊಂಡು ದುರ್ನಾಥ ಬಡಿಯುವ ನೀರು ರಸ್ತೆಗೆ ಹರಿಯುವುದರಿಂದಾಗಿ ಜೋಗಿಮಟ್ಟಿಗೆ ಹೋಗುವ ಮಾರ್ಗ ಮತ್ತು ಪುಟ್ಟಗೌರಿ ಬಡಾವಣೆಗೆ ಹೊಂದಿಕೊಂಡಿರುವ ಮಾತೃಛಾಯಾ ಬಡಾವಣೆಯಲ್ಲಿನ ನಿವಾಸಿಗಳು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ.
ಮಾತೃಛಾಯಾ ಬಡಾವಣೆಯಲ್ಲಿನ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಕಲುಷಿತ ನೀರು ಉಕ್ಕಿ ಹರಿದು ರಸ್ತೆ ಸೇರಿದ್ದರ ಪರಿಣಾಮ ರಸ್ತೆಯಲ್ಲೇ ಮತ್ತೊಂದು ಗುಂಡಿ ನಿರ್ಮಾಣವಾಗಿದೆ.
ಶಾಲಾ, ಕಾಲೇಜ್ ಗಳಿಗೆ ತೆರಳುವ ಮಕ್ಕಳು, ವಯೋವೃದ್ಧರು, ಸಾರ್ವಜನಿಕರು ಇದೇ ರಸ್ತೆಯಲ್ಲಿ ಓಡಾಟ ಮಾಡಬೇಕಿದ್ದು ನಿತ್ಯ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಪ್ರಮುಖ ಸ್ಥಳವಾಗಿದ್ದು ಒಳ ಚರಂಡಿಯ ಮ್ಯಾನ್‌ಹೋಲ್‌ನಿಂದ ಕಳೆದ ನಾಲ್ಕೈದು ತಿಂಗಳಿಂದ ಕಲುಷಿತ ನೀರು ಉಕ್ಕಿ ರಸ್ತೆಯ ತುಂಬಾ ಹರಿಯುತ್ತಿದೆ. ಇದರ ಪರಿಣಾಮ ಸುತ್ತಮುತ್ತಲ ಸ್ಥಳಗಳಿಗೂ ಕೆಟ್ಟ ದುರ್ವಾಸನೆ ಹರಡಿದೆ. ಇಡೀ ನಿವಾಸಿಗಳು ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಶಾಲಾ, ಕಾಲೇಜು, ದೇವಾಲಯ ಮುಂತಾದ ಶುಭ ಕಾರ್ಯಗಳಿಗೆ ತೆರಳುವವರು ಒಳಚರಂಡಿಯ ಮಲಿನ ನೀರನ್ನು ತುಳಿದುಕೊಂಡೇ ತೆರಳುವಂತಾಗಿದೆ.
ಉಕ್ಕಿ ಹರಿಯುತ್ತಿರುವ ಒಳಚರಂಡಿ ಕಲುಷಿತ ನೀರನ್ನು ತಡೆಗಟ್ಟಿ ಒಳಚರಂಡಿಯ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬೇಕೆಂದು ಸಾರ್ವಜನಿಕರು ಹಾಗೂ ನೀಲಾದ್ರಿ ನೇತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ನಗರಸಭೆಗೆ ಮನವಿ ಸಲ್ಲಿಸಿ ಹಲವು ಸಲ ಅಲೆದರೂ ಸಮಸ್ಯೆ ಮಾತ್ರ ಜೀವಂತವಾಗಿದೆ.
ಉಕ್ಕಿ ಹರಿಯುತ್ತಿರುವ ಒಳ ಚರಂಡಿ ಕಲುಷಿತ ಕೊಚ್ಚೆ ನೀರಿನ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿ ನಗರಸಭೆ ವಿರುದ್ಧ ಉಪ ಲೋಕಾಯುಕ್ತರಿಗೆ ಲಿಖಿತ ದೂರು ನೀಡಿದರೂ ನಗರಸಭೆ ಆಯುಕ್ತರು ಕ್ಯಾರೇ ಎನ್ನುತ್ತಿಲ್ಲ. ಅಲ್ಲದೆ ವಿಳಂಬ ಮತ್ತು ಉದಾಸೀನತೆ ವರ್ತನೆ ಎದ್ದು ಕಾಣುತ್ತಿದೆ.
ರಸ್ತೆಯ ಮೇಲೆ ಕೆಟ್ಟ ದುರ್ವಾಸನೆಯಿಂದ ಕೂಡಿದ ನೀರು ಹರಿಯುತ್ತಿರುವುದರಿಂದ ನಿವಾಸಿಗಳು ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡು ಹಿಡಿದು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕಾಗಿದೆ.
ಒಳಚರಂಡಿ ವ್ಯವಸ್ಥೆ ಎಷ್ಟು ಹದೆಗೆಟ್ಟಿದೆಯೆಂದರೆ ರಸ್ತೆಗಳಲ್ಲಿನ ಯುಜಿಡಿ ಚೇಂಬರ್ಗಳು ತುಂಬಿ ಉಕ್ಕಿ ರಸ್ತೆಯ ಮೇಲೆಲ್ಲಾ ಹರಿಯುತ್ತಿದ್ದರೂ, ನಗರಸಭೆ ಮಾತ್ರ ತಣ್ಣಗಿರುವುದನ್ನು ರೂಢಿಸಿಕೊಂಡಿದೆ.
ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ಸಾಧ್ಯವಾಗದೇ ಇರುವುದು ನಗರಸಭೆಯ ಕಾರ್ಯಕ್ಷಮತೆಯನ್ನು ಬೊಟ್ಟು ಮಾಡಿ ತೋರಿಸುವಂತಿದೆ. ಜನರು ಮೂಗು ಮುಚ್ಚಿ ತಿರುಗಾಡಬೇಕಾಗಿದೆಯಲ್ಲದೇ, ಈ ದುರ್ನಾತದ ನಡುವೆಯೇ ಊಟ ತಿಂಡಿ ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಅವ್ಯವಸ್ಥೆಯ ಕುರಿತಂತೆ ನಿವಾಸಿಗಳು ಸಾಕಷ್ಟು ಬಾರಿ ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ನಗರಸಭೆಯ ಆಡಳಿತ ಮಾತ್ರ ತನ್ನ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಾ, ಸಾರ್ವಜನಿಕರ ಸಮಸ್ಯೆ ಪರಿಹರಿಸಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ.
ಸುತ್ತ ಮುತ್ತಲ ಬಡಾವಣೆಗಳಿಂದ ಒಳ ಚರಂಡಿ ಮೂಲಕ ಹರಿದು ಬರುವ ಕೊಳಚೆ ನೀರಿಗೆ ಚರಂಡಿ ಹಾಗೂ ಶೌಚಾಲಯ, ಸ್ನಾನದ ನೀರು ಸೇರಿಕೊಂಡು ಮುಂದೆ ಹರಿದು ಹೋಗಲು ಸಾಧ್ಯವಾಗದೆ ಇರುವದರಿಂದ ಸಮಸ್ಯೆ ಉಲ್ಬಣವಾಗಿದೆ.
ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಕೊಳಚೆ ನೀರಿನ ಮೇಲೆ ತಮ್ಮ ವಾಹನಗಳನ್ನು ವೇಗವಾಗಿ ಚಲಿಸಿಕೊಂಡು ಹೋಗುವಾಗ ಪಾದಚಾರಿಗಳಿಗೆ ಕೊಳಚೆಯ ಮಜ್ಜನವಾಗುವುದು ತಪ್ಪುತ್ತಿಲ್ಲ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ನಗರಸಭೆ ಈ ಎರಡು ಇಲಾಖೆಗಳು ಮೌನದಿಂದ ಇವೆ. ಹಾಗಾಗಿ ಒಳಚರಂಡಿ ಕಟ್ಟಿಕೊಂಡು ಅವಾಂತರ ಸೃಷ್ಟಿಯಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ಬಿಗಡಾಯಿಸಿ ಒಳಚರಂಡಿ ಅವ್ಯವಸ್ಥೆ ಅಸಹನೀಯವಾಗಿದೆ. ದೂರುಗಳಿಗೆ ಸ್ಪಂದಿಸಿ ಸಮಸ್ಯೆ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ನಗರಸಭೆ ಚಿಂತಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬುದು ನಾಗರಿಕರ ಅಸಮಾಧಾನ.
ಒಳಚರಂಡಿಯಲ್ಲಿ ಮಲ–ಮೂತ್ರವಲ್ಲದೇ ಬೇರೆ ತ್ಯಾಜ್ಯ ಸೇರಿಕೊಳ್ಳುತ್ತಿರುವುದರಿಂದ ಒಳಚರಂಡಿ ಕಟ್ಟಿಕೊಳ್ಳುತ್ತಿದೆ. ಮ್ಯಾನ್ ಹೋಲ್ ತುಂಬಿ ಗಲೀಜು ನೀರು ಹೊರಬರುತ್ತದೆ. ಸ್ಯಾನಿಟರಿ ಪ್ಯಾಡ್ ಹಾಗೂ ಡೈ ಪರ್ಗಳು ಒಳಚರಂಡಿಯಲ್ಲಿ ಸಿಲುಕಿ ಸಮಸ್ಯೆ ಬಿಗಡಾಯಿಸುತ್ತಿದೆ. ಈ ತ್ಯಾಜ್ಯಗಳು ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಹಾಗಾಗಿ ಒಳಚರಂಡಿ ಕಟ್ಟಿಕೊಳ್ಳಲು ಬಹುಮುಖ್ಯ ಕಾರಣ. ಬಹುತೇಕರು ಪ್ಯಾಡ್ ಹಾಗೂ ಡೈಪರ್ಗಳನ್ನು ಶೌಚದ ಗುಂಡಿಗಳಲ್ಲಿ ಹಾಕುತ್ತಾರೆ. ನೀರಿನಲ್ಲಿ ಕರಗದ ಇವು ಒಂದೆಡೆ ಸಂಗ್ರಹವಾಗಿ ಮ್ಯಾನ್ಹೋ ಲ್ ತುಂಬುತ್ತವೆ ಎಂಬುದು ಪೌರಕಾರ್ಮಿಕರೊಬ್ಬರ ಮಾತಾಗಿದೆ. ಒಳಚರಂಡಿಗೆ ತ್ಯಾಜ್ಯ ಸೇರಿ ಕಟ್ಟಿಕೊಂಡು ರಸ್ತೆಗೆ ಹರಿಯುತ್ತದೆ. ದುರ್ವಾಸನೆ ಸಹಿಸಿಕೊಂಡು ಜೀವನ ಮಾಡುವುದೇ ನಿತ್ಯದ ಗೋಳಾಗಿದೆ ಎಂದು ನಿವಾಸಿ ಗೋಪಾಲ್ ನೋವು ತೋಡಿಕೊಂಡಿದ್ದಾರೆ.
ನಗರಸಭೆ ಆಯುಕ್ತರಿಗೆ ದೂರು ನೀಡಿ ಸಮಸ್ಯೆ ಸರಿಪಡಿಸುವಂತೆ ಸಾಕಷ್ಟು ಸಲ ಕೋರಿದ್ದರೂ ಅವರು ಗಮನ ನೀಡಿರಲಿಲ್ಲ. ಇವರ ವಿರುದ್ಧ ಉಪ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಚಿತ್ರದುರ್ಗಕ್ಕೆ ಆಗಮಿಸಿದ್ದ ಉಪ ಲೋಕಾಯುಕ್ತರಿಗೆ ಸಮಸ್ಯೆ ಪರಿಹಾರ ಮಾಡುವುದಾಗಿ ಆಯುಕ್ತರು ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ಕಳೆದರೂ ನಗರಸಭೆ ಆಯುಕ್ತರು ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದ್ದಾರೆ ಎಂದು ನೀಲಾದ್ರಿ ನೇತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಕುಮಾರ್, ಶ್ರೀನಿವಾಸ್, ಚಂದ್ರಣ್ಣ, ಗೋಪಾಲ್, ಜಗದೀಶ್, ಏಕಾಂತಪ್ಪ ಸೇರಿದಂತೆ ಮತ್ತಿತರರು ಆರೋಪಿಸಿದ್ದಾರೆ.
ಈ ಕುರಿತು ಚಿತ್ರದುರ್ಗ ನಗರಸಭೆ ಆಯುಕ್ತೆ ರೇಣುಕಾ ಅವರಿಗೆ ಪತ್ರಿಕೆ ಮೊಬೈಲ್ ಕರೆ ಮಾಡಿದಾಗ ರಿಂಗುಣಿಸಿದರೂ ರಿಸೀವ್ ಮಾಡಿ ಮಾತನಾಡದಿರುವುದು ಅವರ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿಯಾಗಿದೆ.