ಪ್ರತಿ ಗ್ರಾಮ ಪಂಚಾಯಿತಿಗೊಂದು ಕಾನ್ವೆಂಟ್ ಮಾದರಿ ಶಾಲೆ ನಿರ್ಮಾಣ: ಸಚಿವ ಮುನಿಯಪ್ಪ

News Desk

ಚಂದ್ರವಳ್ಳಿ ನ್ಯೂಸ್, ಬೆಂ.ಗ್ರಾ.ಜಿಲ್ಲೆ:
ವಿದ್ಯಾರ್ಥಿಗಳಿಗೆ ಗುಣಮಟ್ಟದ
, ಮೌಲ್ಯಯುತ ಶಿಕ್ಷಣ ಕಲ್ಪಿಸಲು ಪ್ರತಿ ಗ್ರಾಮ ಪಂಚಾಯಿತಿಗೊಂದು ಕಾನ್ವೆಂಟ್ ಮಾದರಿ ಶಾಲೆ ನಿರ್ಮಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-01ರ ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು.

ನಂತರ ಮಾತನಾಡಿ ಜಿಲ್ಲೆಯಲ್ಲಿ 150 ಕೋಟಿ ರೂ.ಗಳ ಸಿ.ಎಸ್.ಆರ್ ಅನುದಾನದಡಿ 114 ಶಾಲೆಗಳನ್ನು ಅಭಿವೃದ್ಧಿಪಡಿಸಲು ಮಾನ್ಯ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ.

ಹಿಂದೆ ಇದ್ದ  ವಿದ್ಯಾಭ್ಯಾಸದ ಕಠಿಣ ಹಾದಿಯನ್ನು ಈಗಿರುವ ಮಕ್ಕಳು ಅನುಭವಿಸಿ ಬಾರದು ಎಂಬುದರ ಬಗ್ಗೆ ಸಚಿವರು ಹೇಳುತ್ತಾ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಕೌಶಲ್ಯಾಧರಿತ ತರಗತಿಗಳು, ಡಿಜಿಟಲ್ ಲೈಬ್ರರಿ, ಕಂಪ್ಯೂಟರ್ ತರಬೇತಿ ಸೇರಿದಂತೆ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಮಾದರಿ ಶಾಲೆಗಳನ್ನು ನಿರ್ಮಿಸಲಾಗುವುದು. ವಿದ್ಯಾರ್ಥಿಗಳಿಗೆ ಪಿಯುಸಿ ಹಂತದವರೆಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಆಗದಂತೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಶಿಕ್ಷಕರ ನೇಮಕ ಮಾಡಲು ಸಿದ್ಧತೆ ನಡೆಸಲಾಗಿದೆ. ಶಾಲೆಗಳಲ್ಲಿ ಕುಂದು ಕೊರತೆಗಳಲಿದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತಂದಲ್ಲಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಮುಂದಿನ ವರ್ಷದಲ್ಲಿ ಟಾಪ್ 5 ಸ್ಥಾನಗಳಲ್ಲಿ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇರಬೇಕು ಎಂಬುದು ನನ್ನ ಆಸೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕೆಲಸ ಮಾಡಬೇಕು ಅದಕ್ಕೆ ಪೂರಕವಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ಹೇಳಿದರು.

ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳ ಚಲನವಲನ, ಕ್ಷೇಮಾಭಿವೃದ್ಧಿ, ವಿದ್ಯಾಭ್ಯಾಸಕ್ಕೆ ತಯಾರಿ ಹೇಗೆ ನಡೆಸುತ್ತಿದ್ದಾರೆ. ಶಾಲೆಯಿಂದ ಬಂದ ನಂತರ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಮೂಲಕ ಒಳ್ಳೆಯ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿ ಎಂದರು. ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ಗುರಿ ಇಟ್ಟುಕೊಂಡು ತ್ಯಾಗ ಮತ್ತು ಪರಿಶ್ರಮದಿಂದ ಓದಿದರೆ ಉತ್ತಮ ಅಂಕಗಳು ಬರಲು ಸಾಧ್ಯ ಎಂದರು.

Share This Article
error: Content is protected !!
";