ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಪ್ರಮುಖ ಆರೋಪಿಗಳ ಜಾಮೀನು ರದ್ದು ಮಾಡಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾದ ಬೆನ್ನಲ್ಲೇ ಆರೋಪಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪವಿತ್ರಾ ಗೌಡ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಇಷ್ಟು ದಿನಗಳ ಕಾಲ ಸಿನಿಮಾ ಕೆಲಸ ಹಾಗೂ ಫ್ಯಾಮಿಲಿ ಜೊತೆಯಲ್ಲಿ ಬ್ಯುಸಿ ಆಗಿದ್ದ ಆರೋಪಿ ದರ್ಶನ್ ಅವರಿಗೆ ಇನ್ಮುಂದೆ ಜೈಲೇ ಗತಿಯಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಆರೋಪಿ ದರ್ಶನ್ ಬೆಂಗಳೂರಿನಲ್ಲಿ ಇರಲಿಲ್ಲ. ಸತ್ಯಮಂಗಲದ ಅಂದೂರು ಬಳಿ ನಡೆಯುತ್ತಿದ್ದ ಜಾತ್ರೆಯಲ್ಲಿ ಭಾಗಿಯಾಗಿ ಫಾರ್ಮ್‌ಹೌಸ್‌ಗೆ ಕುದುರೆ ಖರೀದಿಸಲು ಅವರು ತೆರಳಿದ್ದರು. ಜಾತ್ರೆಯಲ್ಲಿ ಎರಡು ಕುದುರೆಗಳನ್ನು ಫೈನಲ್ ಮಾಡಿದ್ದರು. ಜಾತ್ರೆಯಲ್ಲಿರುವಾಗಲೇ ಸ್ನೇಹಿತ ಧನ್ವೀರ್ ದೂರವಾಣಿ ಕರೆ ಮಾಡಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ದರ್ಶನ್ ಅವರು ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರಿನ ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ಗೆ ದರ್ಶನ್ ಬಂದರು. ಪತ್ನಿ ವಿಜಯಲಕ್ಷ್ಮೀಯ ಫ್ಲ್ಯಾಟ್ನಲ್ಲಿ ಆರೋಪಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್ನ 15ನೇ ಮಹಡಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ಫ್ಲ್ಯಾಟ್ ನಂ.4154ರಲ್ಲಿ ಕೊಲೆ ಆರೋಪಿ ನಟ ದರ್ಶನ ಬಂಧನವಾಗಿದೆ. ಇನ್ನೋವಾ ಕಾರಿನಲ್ಲಿ ಬಂದ ದರ್ಶನ್ ಅವರು ವಿಜಯಲಕ್ಷ್ಮೀ ಫ್ಲ್ಯಾಟ್ಗೆ ಹಿಂಬದಿ ಗೇಟ್ನಿಂದ ಆಗಮಿಸಿದ್ದರು. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗೇಶ್, ಗೋವಿಂದರಾಜನಗರ ಠಾಣೆ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದ ತಂಡವು ಆರೋಪಿ ದರ್ಶನ್ ಅವರನ್ನು ಬಂಧಿಸಿತು.

