ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಬರ್ಬರ ಹತ್ಯೆ ಖಂಡಿಸಿ ಹಾಗೂ ಇತರೆ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ದಾಳಿ ಖಂಡಿಸಿ ದೆಹಲಿಯ ಬಾಂಗ್ಲಾದೇಶ ಹೈಕಮಿಷನ್ ಕಚೇರಿ ಎದುರು ವಿಶ್ವ ಹಿಂದು ಪರಿಷತ್ (ವಿಹೆಚ್ಪಿ) ಮತ್ತು ಬಜರಂಗ ದಳದ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹಿಂದೂ ಜಾಗರಣ್ ಮಂಚ್ ಮತ್ತು ಸರ್ಬೋ ಭಾರತೀಯ ಹಿಂದಿ ಬಂಗಾಳಿ ಸಂಘಟನೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳ ಸದಸ್ಯರು ನೆರೆಯ ರಾಷ್ಟ್ರದಲ್ಲಿ ಬಲಿಯಾದವರಿಗೆ ನ್ಯಾಯ ಒದಗಿಸಬೇಕು, ಅಲ್ಲಿ ಅಲ್ಪಸಂಖ್ಯಾತರರಾಗಿರುವ ಹಿಂದುಗಳ ರಕ್ಷಣೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
ರಾಷ್ಟ್ರ ರಾಜಧಾನಿಯ ಜೊತೆಗೆ, ಮಧ್ಯಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಪ್ರತಿಭಟನೆಗಳು ನಡೆದಿವೆ.ದೆಹಲಿ ಪೊಲೀಸರೊಂದಿಗೆ ಘರ್ಷಣೆ: ದೆಹಲಿಯಲ್ಲಿನ ಬಾಂಗ್ಲಾದೇಶ ಹೈಕಮಿಷನ್ ಹೊರಗೆ ವಿಎಚ್ಪಿ ಮತ್ತು ಬಜರಂಗ ದಳದ ಪ್ರತಿಭಟನಾಕಾರರು ಬೆಳಿಗ್ಗೆಯೇ ಜಮಾಯಿಸಿ ರಾಜತಾಂತ್ರಿಕ ಕಚೇರಿಯ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ಪೊಲೀಸರು ತಡೆದರು.
ಪ್ರತಿಭಟನೆ ವೇಳೆ ಹೋರಾಟಗಾರರು ಮತ್ತು ಪೊಲೀಸರ ಮಧ್ಯ ಘರ್ಷಣೆ ಉಂಟಾಯಿತು. ಮಧ್ಯಾಹ್ನದ ವೇಳೆ, ಬ್ಯಾರಿಕೇಡ್ಗಳನ್ನು ದಾಟಿ ಬಂದ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಫೋರ್ಸ್ಗಳು ತಡೆದವು.
ಹೈಕಮಿಷನ್ ಕಚೇರಿಯೊಳಗೆ ಪ್ರತಿಭಟನಾಕಾರರು ನುಗ್ಗದಂತೆ ತಡೆಯಲು ಮೂರು ಪದರಗಳ ಬ್ಯಾರಿಕೇಡ್ಗಳನ್ನು ನಿರ್ಮಿಸಿ ಭಾರೀ ಭದ್ರತೆ ನೀಡಲಾಗಿತ್ತು.
ಪ್ರತಿಭಟನೆಯ ತೀವ್ರತೆ ಗಮನಿಸಿ ಭದ್ರತೆ ಹೆಚ್ಚಿಸಲಾಯಿತು. ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಕಷ್ಟು ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾ ವಿರುದ್ಧ ಘೋಷಣೆ:
ಭಾರತ್ ಮಾತಾ ಕಿ ಜೈ, ಯೂನಸ್ ಸರ್ಕಾರ್ ಹೋಶ್ ಮೇ ಆವೋ ಮತ್ತು ಹಿಂದೂ ಹತಿಯಾ ಬಂದ್ ಕರೋ ಸೇರಿದಂತೆ ಹಲವು ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.
ಬಾಂಗ್ಲಾದೇಶದಲ್ಲಿ ಹುಡುಕಿ ಹುಡುಕಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ಮಾನ ಕಳೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿಶ್ವ ಹಿಂದೂ ಪರಿಷತ್ಸುರೇಂದ್ರ ಕುಮಾರ್ ಗುಪ್ತಾ ಮಾತನಾಡಿ, ಬಾಂಗ್ಲಾದೇಶದಲ್ಲಿ ಅಮಾಯಕ ಹಿಂದೂ ಯುವಕನನ್ನು ಮರಕ್ಕೆ ನೇತುಹಾಕಿ ಜೀವಂತವಾಗಿ ಕೊಂದ ಹೃದಯ ವಿದ್ರಾವಕ ಮತ್ತು ಅಮಾನವೀಯ ಘಟನೆ ಇಡೀ ಹಿಂದೂ ಸಮುದಾಯವನ್ನು ಕೆರಳಿಸಿದೆ. ಈ ಘಟನೆ ಕೇವಲ ವ್ಯಕ್ತಿಯ ಕೊಲೆಯಲ್ಲ. ಅದು ಮಾನವ ಹಕ್ಕುಗಳು, ಧಾರ್ಮಿಕ ಸ್ವಾತಂತ್ರ್ಯ ಮತ್ತು ನಾಗರಿಕ ಸಮಾಜದ ಮೌಲ್ಯಗಳ ಹರಣ ಎಂದು ಅವರು ವಾಗ್ದಾಳಿ ನಡೆಸಿದರು.
ಈ ಘೋರ ಅಪರಾಧ ತಡೆಯಬೇಕು ಮತ್ತು ಬಲಿಪಶುವಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ವಿವಿಧೆಡೆ ಹೋರಾಟ:
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ, ಹಿಂದೂ ಜಾಗರಣ್ ಮಂಚ್ ಮತ್ತು ವಿಎಚ್ಪಿ ಸದಸ್ಯರು ಮಂಗಳವಾರ ಬಾಂಗ್ಲಾದೇಶ ವೀಸಾ ಅರ್ಜಿ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದರು.
ತೆಲಂಗಾಣದ ಹೈದರಾಬಾದ್ನ ಕೊತ್ತಪೇಟ ಪ್ರದೇಶದಲ್ಲಿ ವಿಎಚ್ಪಿ ಮತ್ತು ಇತರ ಹಿಂದೂ ಸಂಘಟನೆಗಳು ಹಿಂದುಗಳ ಮೇಲಿನ ದಾಳಿಗಳನ್ನು ಖಂಡಿಸಿದರು. ಮಧ್ಯಪ್ರದೇಶದಲ್ಲೂ ಹೋರಾಟ ನಡೆದಿದೆ.
ಭಾರತೀಯ ಹೈಕಮಿಷನರ್ಗೆ ಸಮನ್ಸ್:
ಬಾಂಗ್ಲಾದೇಶದ ವಿರುದ್ಧ ಭಾರತದ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಅಲ್ಲಿನ ಸರ್ಕಾರವು ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನು ಕರೆಸಿ, ಈ ಕುರಿತು ಕಳವಳ ವ್ಯಕ್ತಪಡಿಸಿದೆ. ಜೊತೆಗೆ, ನವದೆಹಲಿ, ಸಿಲಿಗುರಿ ಮತ್ತು ಅಗರ್ತಲಾದಲ್ಲಿನ ಕಾನ್ಸುಲರ್ ಮತ್ತು ವೀಸಾ ಕೇಂದ್ರಗಳನ್ನು ಬಾಂಗ್ಲಾದೇಶ ಸ್ಥಗಿತಗೊಳಿಸಿದೆ.

