ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದಾವಣಗೆರೆ ರಸ್ತೆ ಸಂಚಾರಿ ಪೊಲೀಸ್ ಠಾಣೆ ಸಮೀಪವಿರುವ ದೊಡ್ಡ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಮ ಪವಿತ್ರವಾದ ರಂಜಾನ್ ಹಬ್ಬವನ್ನು ಭಾನುವಾರ ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆ ಎಂಟು ಗಂಟಗೆ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಮುಸ್ಲಿಂರು ಅಲ್ಲಾನನ್ನು ಪ್ರಾರ್ಥಿಸಿದರು. ಶ್ವೇತ ವಸ್ತ್ರಧಾರಿಗಳಾಗಿದ್ದ ಮುಸ್ಲಿಂರು ತಲೆಗೆ ಬಿಳಿ ಟೋಪಿಗಳನ್ನು ಧರಿಸಿ ಪ್ರಾರ್ಥನೆಗೆ ತೆರಳಿದರೆ. ಟೋಪಿ ಇಲ್ಲದವರು ಕರವಸ್ತ್ರಗಳನ್ನು ತಲೆಗೆ ಸುತ್ತಿಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ದ್ವಿಚಕ್ರ ವಾಹನ ಹಾಗೂ ಆಟೋಗಳಲ್ಲಿ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂರು ಮನೆಯಿಂದಲೆ ಚಾಪೆ, ಜಮಖಾನ, ಬೆಡ್‌ಶೀಟ್‌ಗಳನ್ನು ತೆಗೆದುಕೊಂಡು ಹೋಗಿ ಮೈದಾನದಲ್ಲಿ ಹಾಸಿಕೊಂಡು ಪ್ರಾರ್ಥನೆಯಲ್ಲಿ ತೊಡಗಿದರು.
ಮುಸ್ಲಿಂ ಮುಖಂಡರುಗಳಾದ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‌ವುಲ್ಲಾ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಎಂ.ಕೆ.ತಾಜ್‌ಪೀರ್, ಸೈಯದ್ ಅಲ್ಲಾಭಕ್ಷಿ, ಜಿಲ್ಲಾ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಎಂ.ಸಿ.ಓ.ಬಾಬು, ಎ.ಜಾಕೀರ್ ಹುಸೇನ್ ಸೇರಿದಂತೆ ಸಾವಿರಾರು ಮುಸ್ಲಿಂರು ಸಾಮೂಹಿಕ ಪ್ರಾರ್ಥನೆಯಲ್ಲಿದ್ದರು.
ಗಾಂಧಿವೃತ್ತ ಹಾಗೂ ಸಂಚಾರಿ ಠಾಣೆ ಸಮೀಪ ಪೊಲೀಸ್ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡ ಇಟ್ಟು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲಾಯಿತು.