ಮೈ ದುಂಬಿ ಹರಿಯುತಿದೆ ಬೆನಕನ ಹಳ್ಳ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಕಳೆದ  ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಆಶ್ಲೇಷ ಮಳೆಯಿಂದ, ಯದ್ದಲಹಳ್ಳಿ ಸಮೀಪದ ಪುರಾತನ ಶ್ರೀ ಬೆನಕಪ್ಪ ಸ್ವಾಮಿ ದೇವಸ್ಥಾನವಿರುವ ಬೆನಕನಹಳ್ಳ ಮೈದುಂಬಿ ಹರಿಯುತ್ತಿದೆ. ಸಾಮಾನ್ಯ ದಿನಗಳಲ್ಲಿ ಕಾಣದಷ್ಟು ನೀರಿನ ಹರಿವು ಈಗ ಹೆಚ್ಚಾಗಿದ್ದು, ಬಯಲುಸೀಮೆಯ ಉತ್ತರ ಪಿನಾಕಿನಿ ನದಿಯ ತಿರುವುಗಳು ಮತ್ತು ಹೊಳೆಗಳ ಹರಿವು ಸೃಷ್ಟಿಸಿರುವ ಕಿರು ಜಲಪಾತ ಪ್ರಕೃತಿಪ್ರಿಯರಿಗಾಗಿ ಹೊಸ ಆಕರ್ಷಣೆಯಾಗಿ ಹೊರಹೊಮ್ಮಿದೆ.

 ಹಸಿರು ಗುಡ್ಡಗಳ ನಡುವೆ ಹರಿಯುತ್ತಿರುವ ನೀರಿನ ಮಂಜಿನ ಸಿಂಚನ, ಗರ್ಜಿಸುವ ಶಬ್ದ, ಹಕ್ಕಿಗಳ ಕಲರವ, ನವಿಲುಗಳ ನೃತ್ಯ ಹಲವರಿಗೆ ಮಲೆನಾಡಿನ ಅನುಭವ ನೀಡುತ್ತಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಇವುಗಳ ಮನೋಹರ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಾ, “ಇದು ಮಳೆಗಾಲದಲ್ಲಿನ ಅವಿಸ್ಮರಣೀಯ ಅನುಭವ” ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

- Advertisement - 

 ದೇವಾಲಯದಲ್ಲಿ ಸರ್ಪ ಸಹಿತ ಕಾಣಿಸುವ ಶಿವಲಿಂಗ ಹಾಗೂ ಗಣೇಶನ ಮುಖ ಹೋಲುವ ಅನನ್ಯ ಉದ್ಭವ ಮೂರ್ತಿಗಳು ಇವೆ. ಈ ಮೂರ್ತಿಗಳಿಗೆ ಸುತ್ತಮುತ್ತಲಿನ ಜನರು ಐದಾರು ತಲೆಮಾರುಗಳಿಂದ ಪೂಜಾ ಅಭ್ಯಾಸಗಳನ್ನು ನಡೆಸಿಕೊಂಡು ಬಂದಿದ್ದು, ಇದು ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. 

ಇತ್ತೀಚಿಗೆ ಬೆನಕನಹಳ್ಳ ಸಮೀಪದ ಶನಿ ಮಹಾತ್ಮ ಸ್ವಾಮಿ ಮತ್ತು ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಗಳೂ ನಿರ್ಮಾಣಗೊಂಡಿದ್ದು, ದೇವಸ್ಥಾನ ಸುತ್ತಮುತ್ತಲಿನ ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಆಕರ್ಷಣೆ ಹೆಚ್ಚಿಸಿದೆ. 

- Advertisement - 

ಇಲ್ಲಿ ಬೆಂಗಳೂರು ಇಸ್ಕಾನ್ ದೇವಸ್ಥಾನದ ಗೋಶಾಲೆ ಸಹ ಒಂದು ಪ್ರಮುಖ ಆಕರ್ಷಣೆಯಾಗಿದೆ. ಭಕ್ತರಿಗೆ ಶ್ರೀ ಬೆನಕಪ್ಪಸ್ವಾಮಿ ದೇವಸ್ಥಾನ ದೈವೀ ಶಾಂತಿ ನೀಡುತ್ತಿರುವುದಾದರೆ,

ಪ್ರಕೃತಿಪ್ರಿಯರಿಗೆ ಮಳೆಯ ಸೊಗಸು ಮತ್ತು ಸಾಹಸದ ಸವಿಯನ್ನು ಬೆನಕನಹಳ್ಳ ಮಲೆನಾಡಿನ ಮಳೆಗಾಲದ ಸೌಂದರ್ಯ ನೀಡುತ್ತದೆ. ಈ ಮಳೆಗಾಲವು ಬೆನಕನಹಳ್ಳವನ್ನು ನಿಜಕ್ಕೂ ಒಂದು ವೈಭವಮಯ ತಾಣವಾಗಿಸಿದೆ. 

ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ 15 ಕಿಮೀ ದೂರದಲ್ಲಿರುವ ಈ ಸ್ಥಳ ವಾರಾಂತ್ಯದ ವಿಹಾರಕ್ಕೆ ಸೂಕ್ತವಾಗಿದೆ. ಇಲ್ಲಿ ಮಾಂಸಾಹಾರ ಸೇವನೆ ಮತ್ತು ಮದ್ಯಪಾನ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ದೇವಸ್ಥಾನ ಸುತ್ತಮುತ್ತಲೂ ಪೊಲೀಸ್ ಬೀಟ್ ಇದೆ, ಸರಿಯಾದ ಶಿಸ್ತನ್ನು ಕಾಪಾಡಲಾಗುತ್ತಿದೆ. ಭಕ್ತರು ಮತ್ತು ಪ್ರವಾಸಿಗರು ಈ ನಿಯಮಗಳಿಗೆ  ಪಾಲನೆ ಮಾಡಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.

 

Share This Article
error: Content is protected !!
";