ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನನ್ನ ಹೆತ್ತವರು
ಕೂಲಿ ನಾಲಿ ಮಾಡಿ ಉಣಿಸಿದರು
ಸಾಲ ಸೋಲ ಮಾಡಿ ಓದಿಸಿದರು
ನಮ್ಮ ಬದುಕು ಬಂಗಾರವಾಗಲಿ ಎಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟು ಸವೆದು ಹೋದರು.
ಆದರೆ ನಾನು ಅವರಿಗೆ ಸೇಬು ಹಣ್ಣು ಕೊಯ್ದು ಕೊಟ್ಟಿದ್ದನ್ನು ಕಿತ್ತಳೆ ಹಣ್ಣು ತೊಳೆ ಮಾಡಿ ಕೊಟ್ಟಿದ್ದನ್ನೇ ದೊಡ್ಡ ಸೇವೆ ಎಂದುಕೊಂಡೆ, ಯಾವಾಗಲೋ ಒಮ್ಮೆ ಕಾಲ್ಬೆರಳ ಉಗುರನ್ನು ಕತ್ತರಿಸಿ ಹಾಕುವುದನ್ನೇ ದೊಡ್ಡ ಔದಾರ್ಯ ಎಂದುಕೊಂಡೆ, ಅವರ ಮುಸುಕಾದ ಕನ್ನಡಕವನ್ನು ಒರೆಸಿ ಕೊಡುವುದನ್ನೇ ದೊಡ್ಡ ಕೆಲಸ ಎಂದುಕೊಂಡೆ, ಎಂದೋ ಒಮ್ಮೆ ಜಮ್ಮುಯಿಂದ ಆಕ್ರೋಟ್ ತಂದು ಕುಟ್ಟಿ ತಿನ್ನಲು ಕೊಟ್ಟು ನನ್ನಂತ ಮಗ ಯಾರೂ ಇಲ್ಲವೇನೋ ಎಂದು ಬೀಗಿದೆ. ಕೆಲವೊಮ್ಮೆ ಅವರು ಅನಾರೋಗ್ಯದಿಂದ ಬಳಲುತ್ತಿರುವಾಗ ಔಷಧಿಗಳನ್ನು ಕೊಡುವುದು ಮತ್ತು ಯುಗಾದಿ ಹಬ್ಬದಂದು ಚಂದಿರನನ್ನು ತೋರಿಸುವಂತಹ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದೇ ನಮ್ಮ ದೊಡ್ಡ ಜವಾಬ್ದಾರಿ ಎಂದುಕೊಂಡೆ.
ಆದರೆ ಅವರಿಗೆ ಅವಶ್ಯಕತೆ ಇರುವಾಗ ಹತ್ತಿರವಿಲ್ಲದ ಹಾಗೆ ಅವರಿಗೆ ಬೇಕಾಗಿರುವುದನ್ನು ಕೇಳಿ ಕೊಡಿಸದ ಹಾಗೆ ಅವರ ಇಳಿವಯಸ್ಸಿನಲ್ಲಿ ಅವರದೇ ಕಥೆ ಕೇಳಲು ಸಮಯ ಕೊಡದ ಹಾಗೆ…
ಅವರ ಬಳಿ ಬರೀ ನಮ್ಮ ಮಕ್ಕಳ ಗುಣಗಾನ ಮಾಡುವುದನ್ನೇ ಖುಷಿ ಎಂದುಕೊಂಡೆ ಕೊನೆಯಲ್ಲಿ ಅವರಿಗೆ ಬೇಕಾಗಿರುವುದೇನು ಎಂದು ತಿಳಿಯದಾದೆ ತಿಳಿದರೂ ಏನಾದರೂ ಕೊಡಿಸದಂತ ಜಿಪುಣನಾದೆ.
ಈಗ ನನ್ನ ಹೆತ್ತವರಿಗೆ ಕೇಳಿದ್ದನ್ನೆಲ್ಲ ಕೊಡಿಸುವ ಆಸೆ ಅವರು ಬಯಸಿದಾಗೆಲ್ಲ ಅವರಿಗೆ ಸಮಯ ಕೊಟ್ಟು ಅವರು ಬಂದ ದಾರಿಯ ಹಿಂದಿನ ಕಷ್ಟವನ್ನು ಅವರ ಅನುಭವವನ್ನು ಅವರ ಪಕ್ಕದಲ್ಲಿ ಕುಳಿತು ಕೇಳುವ ಆಸೆ.
ಆದರೆ ಎಲ್ಲದಕ್ಕೂ ಕಾಲ ಮಿಂಚಿದೆ ಇದ್ದಾಗ ಅರಿವಾಗದ್ದು ಇಲ್ಲದಾಗ ತುಂಬಾ ಕಾಡುತ್ತದೆ ಹೌದು ಹೃದಯವನ್ನು ತಳಮಣಿಸುತ್ತದೆ.
ಲೇಖನ: ವೆಂಕಟೇಶ ಹೆಚ್ ಚಿತ್ರದುರ್ಗ, 7760023887