ಮೈಸೂರು ದಸರಾ ಅಂಗವಾಗಿ ರತ್ನಖಚಿತ ಸ್ವರ್ಣ ಸಿಂಹಾಸನದ ಜೋಡಣೆ

News Desk

 ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ನವರಾತ್ರಿ ಪೂಜಾ ಕೈಂಕರ್ಯಗಳನ್ನು ನಡೆಸುವ ಹಿನ್ನೆಲೆಯಲ್ಲಿ ಮಂಗಳವಾರ ದರ್ಬಾರ್ ಹಾಲ್​​ನಲ್ಲಿ ಮಹಾರಾಣಿ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ನುರಿತ ಗೆಜ್ಜಗಳ್ಳಿಯವರು ರತ್ನಖಚಿತ ಸ್ವರ್ಣ ಸಿಂಹಾಸನದ ಜೋಡಣೆ ಕಾರ್ಯ ನಡೆಸಿದರು.

ದರ್ಬಾರ್ ಹಾಲ್​​ನಲ್ಲಿ ಗಣಪತಿ ಹೋಮ, ಚಾಮುಂಡಿ ತಾಯಿಯ ಪೂಜೆ, ಹೋಮ-ಹವನಗಳನ್ನು ಜೋಡಣೆ ಕಾರ್ಯಕ್ಕೂ ಮುನ್ನ ನೆರವೇರಿಸಲಾಯಿತು. ಬಳಿಕ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನವನ್ನು ತಂದು ಜೋಡಿಸಲಾಯಿತು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿತ್ತು.

- Advertisement - 

ನವರಾತ್ರಿ ಸಂದರ್ಭದಲ್ಲಿ ಮಾತ್ರ ನೋಡ ಸಿಗುವ ರತ್ನಖಚಿತ ಸ್ವರ್ಣ ಸಿಂಹಾಸನ ರಾಜವಂಶಸ್ಥರಿಗೆ ಸೇರಿದೆ. ಇದನ್ನು ಗೆಜ್ಜೆಗಳ್ಳಿಯ ಗ್ರಾಮಸ್ಥರು ಜೋಡಿಸುತ್ತಾರೆ. ಆ ಬಳಿಕ ದರ್ಬಾರ್ ಹಾಲ್​​ನಲ್ಲಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಪರದೆಯಿಂದ ಮುಚ್ಚಲಾಗುತ್ತದೆ.

ಅರಮನೆಯಲ್ಲಿ ರಾಜ ಪರಂಪರೆಯಂತೆ ನವರಾತ್ರಿ ಸಂಭ್ರಮ ಜರುಗಲಿದ್ದು, ಸೆ.22ರ ದಸರಾ ಉದ್ಘಾಟನೆಯ ದಿನ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗಿನ ಶುಭ ಗಳಿಗೆಯಲ್ಲಿ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿ, ಖಾಸಗಿ ದರ್ಬಾರ್ ನಡೆಸುತ್ತಾರೆ.

- Advertisement - 

ನವರಾತ್ರಿಯ ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಆ ನಂತರ ಸಂಜೆ ಪ್ರತಿದಿನ ಖಾಸಗಿ ದರ್ಬಾರ್ ನಡೆಸುತ್ತಾರೆ. ವಿಜಯದಶಮಿಯ ದಿನ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜವಂಶಸ್ಥರ ನವರಾತ್ರಿ ಪೂರ್ಣಗೊಳ್ಳುತ್ತದೆ.

ಅ.31ರಂದು ಸಿಂಹಾಸನ ವಿಸರ್ಜನೆಯಾಗುತ್ತದೆ. 13 ಭಾಗಗಳಾಗಿ ವಿಸರ್ಜನೆಯಾದ ಸಿಂಹಾಸನವನ್ನು ಪುನಃ ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿಡಲಾಗುತ್ತದೆ.

ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಉಪಸ್ಥಿತಿಯಲ್ಲಿ ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯಿಂದ ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಹೊರತೆಗೆದು ಪೂಜೆಯಾದ ನಂತರ ಸಿಂಹಾಸನ ಜೋಡಣೆಗೆ ಚಾಲನೆ ದೊರೆಯಲಿದೆ.

ಈ ವೇಳೆ ಪಟ್ಟದ ಆನೆ, ಹಸು, ಕುದುರೆ ಪಾಲ್ಗೊಳ್ಳುತ್ತವೆ. ಈ ಸಲ ಅರಮನೆಯಲ್ಲಿ ನಡೆಯುವ ಪೂಜೆಗಳಿಗೆ ಪಟ್ಟದ ಆನೆಗಳಾಗಿ ಶ್ರೀಕಂಠ ಮತ್ತು ಏಕಲವ್ಯ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಸಿಂಹಾಸನ ಜೋಡಣೆ:
ರತ್ನ ಖಚಿತ
ಸಿಂಹಾಸನವನ್ನು 13 ಭಾಗಗಳಾಗಿ ವಿಂಗಡಿಸಲಾಗುತ್ತದೆ.

ಆಸನದ ಒಂದು ಭಾಗ, ಅದನ್ನು ಹತ್ತಲು ಬಳಸುವ ಮೆಟ್ಟಿಲು ಮತ್ತೊಂದು ಭಾಗ ಹಾಗೂ ಇದಕ್ಕೆ ಕಳಶವಿಟ್ಟಂತೆ ಸಿಂಗಾರಗೊಳಿಸುವ ಛತ್ರಿ ಮೂರನೇ ಭಾಗವಾಗಿ ಪ್ರತ್ಯೇಕವಾಗಿ ಇರಿಸಿದ್ದು ಎಲ್ಲವನ್ನೂ ಜೋಡಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ರಾಜವಂಶಸ್ಥರು ಪೂಜೆ ಸಲ್ಲಿಸುತ್ತಾರೆ. ಬಳಿಕ ಸಿಂಹದ ಆಕೃತಿ ಜೋಡಿಸಲಾಗುತ್ತದೆ. ಆಗ ಪರಿಪೂರ್ಣ ಸಿಂಹಾಸನವಾಗಲಿದೆ.

 

 

Share This Article
error: Content is protected !!
";