ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿಯ ಮಧ್ಯಂತರ ವರದಿಯನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.
ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿಯ ಮಧ್ಯಂತರ ವರದಿ ಸಲ್ಲಿಕೆ ಆಗಿರುವುದರಿಂದ ಶೀಘ್ರ ಈ ವರದಿ ಆಧರಿಸಿ ಒಳ ಮೀಸಲಾತಿ ಜಾರಿಗೆ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾ. ನಾಗಮೋಹನ್ ದಾಸ್ ಅವರು ಗುರುವಾರ ಕ್ಯಾಬಿನೆಟ್ ಸಭೆಗೂ ಮುನ್ನ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಮಧ್ಯಂತರ ವರದಿ ಸಲ್ಲಿಸಿದರು.
ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ನಂತರ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಲುವಾಗಿ ಕಳೆದ ಎರಡು ತಿಂಗಳಿಗಿಂತ ಹೆಚ್ಚು ನಾನು ಹಾಗೂ ನನ್ನ ತಂಡ ಆಳವಾದ ಅಧ್ಯಯನ ಮಾಡಿ 104 ಪುಟಗಳ ಒಳಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇದರಲ್ಲಿ ತರಾತುರಿ ಪ್ರಶ್ನೆಯೇ ಇಲ್ಲ. ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ನಮ್ಮನ್ನು ಕೇಳಲಿಲ್ಲ. ನಾವೇ ಸ್ವ ಇಚ್ಛೆಯಿಂದ ವರದಿ ನೀಡಿದ್ದೇವೆ ಎಂದು ನ್ಯಾ.ನಾಗಮೋಹನ್ ದಾಸ್ ತಿಳಿಸಿದರು.
ಈಗ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಸರ್ಕಾರ ವರದಿ ಆಧರಿಸಿ ಏನು ತೀರ್ಮಾನ ಮಾಡುತ್ತೊ ನೋಡೋಣ ಎಂದು ಅವರು ತಿಳಿಸಿದರು.
ಉದ್ಯೋಗಕಾಂಕ್ಷಿಗಳಿಗೆ ಅನ್ಯಾಯ ಆಗಬಾರದು. ಅವರಿಗೆ ಶಾಶ್ವತವಾದ ಪರಿಹಾರ ಕೊಡಬೇಕು.ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.ವರದಿ ಬಗ್ಗೆ ಸರ್ಕಾರ ಏನೂ ಉತ್ತರ ಕೊಟ್ಟಿಲ್ಲ. ನೇಮಕಾತಿ ಬಗ್ಗೆ ನಾವು ಏನೂ ಸಲಹೆ ಕೊಟ್ಟಿಲ್ಲ ಎಂದು ನ್ಯಾ.ದಾಸ್ ತಿಳಿಸಿದರು.
ಸರ್ಕಾರ ಕೈಗೊಳ್ಳುವ ತೀರ್ಮಾನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಒಳ ಮೀಸಲಾತಿ ಕುರಿತು ಶಾಶ್ವತ ಪರಿಹಾರ ಕೊಡಬೇಕು ಎಂಬುದು ನನ್ನ ಆಸೆಯಾಗಿದೆ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ಅದರ ಆಧಾರದಲ್ಲಿ ಅಂತಿಮ ವರದಿ ಸಲ್ಲಿಸುತ್ತೇನೆ. ಮಧ್ಯಂತರ ವರದಿ ನೀಡಿದ್ದೇನೆ, ಇದಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ. ಉತ್ತರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಮಧ್ಯಂತರ ವರದಿಯಲ್ಲಿ ಏನಿದೆ ಅಂತ ನಾನು ಹೇಳೋಕೆ ಆಗೊಲ್ಲ. ಸರ್ಕಾರ ಏನ್ ಮಾಡುತ್ತೆ ಅಂತ ಸರ್ಕಾರವನ್ನ ಕೇಳಿ ಎಂದು ಸೂಚ್ಯವಾಗಿ ಅವರು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಎಚ್. ಆಂಜನೇಯ, ಶಾಸಕರಾದ ಬಸಂತಪ್ಪ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.