ಸಮಾಜಮುಖಿ ಚಿಂತನೆಯಿಂದ ಪತ್ರಕರ್ತರು ದೂರವಾಗುತ್ತಿರುವುದಕ್ಕೆ ನಾಡಿಗ್ ವಿಷಾದ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದಿನ ಪತ್ರಕರ್ತರ ಸಮೂಹ ಸಮಾಜಮುಖಿ ಚಿಂತನೆಯಿಂದ ದೂರ ಸರಿಯುತ್ತಿರುವುದರ ಬಗ್ಗೆ 92 ವರ್ಷದ ತುಂಬು ಜೀವನ ನಡೆಸುತ್ತಿರುವ ಹಿರಿಯ ಪತ್ರಕರ್ತ ಸಂತೇಬೆನ್ನೂರಿನ ಸತ್ಯನಾರಾಯಣ ನಾಡಿಗ್ ಕಳವಳ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತರಿಗೆ ಅವರ ಮನೆಯಂಗಳದಲ್ಲಿ ಮನತುಂಬಿ ನಮನ ಸಲ್ಲಿಸುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಹಿಂದಿನ ತಲೆಮಾರಿನ ಪತ್ರಕರ್ತರು ತಮ್ಮ ಸ್ವಂತ ಹಿತಾಸಕ್ತಿಯನ್ನು ಮರೆತು ಸಮಾಜದ ಉದ್ಧಾರವೇ ಪತ್ರಕರ್ತರ ಕರ್ತವ್ಯ ಎಂದು ಭಾವಿಸಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತೀಚೆಗೆ ಬಹುತೇಕ ಕಡೆ ಆಸಕ್ತಿಗಳೇ ಬೇರೆ ಆಗಿದ್ದು
, ಸ್ವಯಂ ಉದ್ದಾರವೇ ವಿಜೃಂಭಿಸುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಈ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ತಾವು ಜನವಾಣಿ ಪತ್ರಿಕೆಯಿಂದ ಆರಂಭಿಸಿದ ವೃತ್ತಿ ದಿನಗಳನ್ನು ನೆನಪಿಸಿಕೊಂಡರು. ತಾವು ಕೆಲಸ ಮಾಡಿದ ತಾಯಿ ನಾಡು ಪತ್ರಿಕೆಯ ಜನಮುಖಿ ಪತ್ರಿಕೋದ್ಯಮವನ್ನು ಸ್ಮರಿಸಿದರು. ಗ್ರಾಮೀಣ ಭಾಗದ ಪತ್ರಕರ್ತರು ಅನುಭವಿಸುವ ವೃತ್ತಿ ಸಂಕಷ್ಛಗಳನ್ನು ತೆರೆದಿಟ್ಟು ಆಗಿನ ಕಾಲದಲಲ್ಲಿ ತಾಲ್ಲೂಕ ಮಟ್ಟದಲ್ಲಿ ತಾವು ಕಾರ್ಯ ನಿರತ ಪತ್ರಕರ್ತರ ಸಂಘಟನೆಯನ್ನು ಮಾಡಿದ್ದನ್ನು ನೆನಪಿಸಿಕೊಂಡರು. ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು.

ಹಿರಿಯ ಪತ್ರಕರ್ತರ ಮಾಸಾಶನ ಸಕಾಲಕ್ಕೆ ಬಿಡುಗಡೆಯಾಗದೆ ಸಂಕಷ್ಟದ ಎದುರಾದಾಗ ಸಂಘ ಸ್ಪಂದಿಸಿ ಮಾಸಾಶನ ಬಿಡುಗಡೆಯಾಗುವಂತೆ ಮಾಡುವಲ್ಲಿ ನೀಡಿದ ಸಹಕಾರವನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಗೌರವ ಸ್ವೀಕರಿಸಿದ ಸತ್ಯನಾರಾಯಣ ನಾಡಿಗರ ಪುತ್ರ, ಹಿರಿಯ ಪತ್ರಕರ್ತ ಶ್ರೀವತ್ಸ ನಾಡಿಗ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಸಂಘ ಸಕ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾರು ಗಮನಿಸಿದ ಪತ್ರಕರ್ತರನ್ನು ಸಂಘ ಗುರುತಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಹೊರ ಜಗತ್ತಿಗೆ ಹೆಚ್ಚಾಗಿ ಪರಿಚಯವಾಗದೆ ಡೆಸ್ಕ್‌ನಲ್ಲಿ ಕಾರ್ಯನಿರ್ವಹಿಸಿ ಪತ್ರಿಕೋದ್ಯಮಕ್ಕೆ ತಮ್ಮದೆ ಕಾಣಿಕೆ ನೀಡುತ್ತಿರುವ ತೆರೆ ಮರೆಯ ಪತ್ರಕರ್ತರನ್ನು ಸಂಘ ಗುರುತಿಸಲಿ ಎಂದು ಆಶಿಸಿದರು.

ಐದು ದಶಕಗಳ ಸೇವೆ:ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಹಿರಿಯ ಪತ್ರಕರ್ತರನ್ನು ಸಂಘ ಗುರುತಿಸಿ ಮನೆಯಂಗಳದಲ್ಲೇ ಸನ್ಮಾನಿಸುತ್ತಿದೆ. ನಾಡಿಗ್ ಅವರು, ಜನವಾಣಿ ಮತ್ತು ತಾಯಿನಾಡು ಪತ್ರಿಕೆಯಿಂದ ಮೊದಲಗೊಂಡು, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಪ್ರಜಾವಾಣಿ, ನಗರವಾಣಿ, ನಾವಿಕ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡುವ ಮೂಲಕ ಐದು ದಶಕಗಳ ಕಾಲ ಪತ್ರಿಕೋದ್ಯಮಕ್ಕೆ ಸಲ್ಲಿಸಿರುವ ವಿಶೇಷ ಸೇವೆ ಸ್ಮರಿಸಿ ಕೆಯುಡಬ್ಲೂಜೆ ಅಭಿನಂದಿಸುತ್ತಿದೆ ಎಂದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ ತಮ್ಮ ವೃತ್ತಿಜೀವನದಿಂದ ನಿವೃತ್ತರಾಗಿರುವ ಅನೇಕ ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಸಂಘ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

ಜೊತೆಗೆ ಸತ್ಯನಾರಾಯಣ ನಾಡಿಗರ ಜೊತೆಗಿನ ತಮ್ಮ ಒಡನಾಟವನ್ನು ಜ್ಞಾಪಿಸಿಕೊಂಡರಲ್ಲದೆ ನಾಡಿಗರ ಶೈಕ್ಷಣಿಕ ಸೇವೆಯನ್ನು ಸಹ ಕೊಂಡಾಡಿದರು. ಕೆಯುಡಬ್ಲೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಸ್ವಾಗತಿಸಿದರು. ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು. ಸಂಘದ ಶರಣು ಬಸಪ್ಪ, ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಮತ್ತಿತರರು ಹಾಜರಿದ್ದರು.

- Advertisement -  - Advertisement - 
Share This Article
error: Content is protected !!
";