ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆನಾಡಿನಲ್ಲಿ ಅತ್ತಿಗೆ ನಾದಿನಿಯರು ತಲೆ ತಲೆ ಹಿಡಿದು ಡಿಕ್ಕಿ ಹೊಡೆದುಕೊಂಡು ಖುಷಿ ಖುಷಿಯಾಗಿ ವಿಶೇಷ ಹಬ್ಬವನ್ನು ಆಚರಿಸಲಾಗುತ್ತಿದೆ. ಡಿಕ್ಕಿ ಹಬ್ಬದ ಆಚರಣೆ ಮೂಲಕ ತಲೆಗೆ ತಲೆ ಡಿಕ್ಕಿ ಹೊಡೆಯುವ ಅಪರೂಪದ ಬುಡಕಟ್ಟು ಸಾಂಪ್ರದಾಯದ ಈ ಹಬ್ಬ ಆಚರಣೆಯಲ್ಲಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ (ಸಿ.ಎನ್.ಮಾಳಿಗೆ) ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಜನ ವಿಶಿಷ್ಟ ಹಬ್ಬ ಆಚರಿಸುತ್ತಾರೆ. ಅಹೋಬಲ ನರಸಿಂಹಸ್ವಾಮಿ ದೇವರ ಜಾತ್ರೆ, ಉತ್ಸವದ ಅಂಗವಾಗಿ ಈ ಆಚರಣೆ ನಡೆಯುತ್ತದೆ. ದೇವರ ಉತ್ಸವ ಮೆರವಣಿಗೆ ವೇಳೆ ನೆಲಕ್ಕೆ ಬಾಳೆ ಹಣ್ಣು, ಬೆಲ್ಲ ಹಾಕಿ ಸೇವಿಸುವ ಸಾಂಪ್ರದಾಯಿಕ ಮಣೇವು ಆಚರಣೆ ಕೂಡ ಇರುತ್ತದೆ.
ಯುವಕರು ಟಗರುಗಳನ್ನು ತಂದು ದೇಗುಲದ ಆವರಣದಲ್ಲಿ ಡಿಕ್ಕಿ ಹೊಡೆಸಿ ಖುಷಿ ಪಡುತ್ತಾರೆ. ಆ ಬಳಿಕ ಅತ್ತಿಗೆ ನಾದಿನಿಯರು ಸಾಂಪ್ರದಾಯಿಕವಾಗಿ ತಲೆ ತಲೆಗೆ ಡಿಕ್ಕಿ ಹೊಡೆದುಕೊಂಡು ಡಿಕ್ಕಿ ಹಬ್ಬ ಆಚರಿಸುತ್ತಾರೆ.
ಅತ್ತಿಗೆ ನಾದಿನಿಯರ ಪ್ರೀತಿಯ ಡಿಕ್ಕಿ ಹೊಡೆಯುವುದು ಒಂದು ಪ್ರೀತಿಯ ಅಪ್ಪುಗೆ ಗಮನ ಸೆಳೆಯುತ್ತದೆ ಈ ಹಬ್ಬ. ಗ್ರಾಮದ ಹೆಣ್ಣು ಮಕ್ಕಳು ಅದೆಷ್ಟು ದೂರದ ಊರಿಗೆ ಸೊಸೆಯಾಗಿ ಹೋಗಿದ್ದರೂ ಸಹ ತಪ್ಪದೆ ಡಿಕ್ಕಿ ಹಬ್ಬಕ್ಕೆ ಬರುತ್ತಾರೆ. ಅತ್ತಿಗೆ, ನಾದಿನಿಯರ ಮಧ್ಯೆ ಏನೇ ವೈಮನಸ್ಸು ಇದ್ದರೂ ಸಹ ಈ ಹಬ್ಬವನ್ನು ಒಗ್ಗೂಡಿ ಆಚರಿಸುತ್ತಾರೆ. ಈ ಹಬ್ಬಕ್ಕೆ ಗೈರಾದರೆ ಸಣ್ಣ ತಲೆನೋವು ಬಂದರೂ ಈ ಹಬ್ಬಕ್ಕೆ ಗೈರಾಗಿದ್ದಕ್ಕೆ ಬಂತೆಂಬ ಭಾವನೆ ಮೂಡತ್ತದೆ. ಹೀಗಾಗಿ, ಅತ್ತಿಗೆ ಮತ್ತು ನಾದಿನಿಯರು ಈ ಹಬ್ಬದಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ.
ಹಿರಿಯೂರು ತಾಲೂಕಿನ ಸಿಎನ್ ಮಾಳಿಗೆ ಗ್ರಾಮದಲ್ಲಿ 3 ದಿನ ಕಾಲ ನಡೆಯುವ ಅಹೋಬಲ ನರಸಿಂಹಸ್ವಾಮಿ ಉತ್ಸವಕ್ಕೆ ತೆರೆ ಬಿದ್ದಿದೆ. ಬುಡಕಟ್ಟು ಸಂಸ್ಕೃತಿಯ ಡಿಕ್ಕಿ ಹಬ್ಬ ಆಚರಿಸಿ ಅತ್ತಿಗೆ-ನಾದಿನಿಯರು ಖುಷಿಪಟ್ಟಿದ್ದಾರೆ. ಮತ್ತೆ ಮುಂದಿನ ವರ್ಷ ಬಂದು ಇದೇ ರೀತಿಯಾಗಿ ಡಿಕ್ಕಿ ಹೊಡೆದುಕೊಂಡು ಹಬ್ಬ ಆಚರಿಸಲಿದ್ದು ಈ ಹಬ್ಬ ಅತ್ಯಂತ ಪುರಾನತ ಕಾಲದಿಂದಲೂ ನಡೆದುಕೊಂಡು ಬಂದಿದೆ.