ಡಿ-16 ಮತ್ತು 17 ರಂದು ನಾಕೀಕೆರೆ ಕೋಡಿ ಆಲದ ಕೆಂಚಾಂಬಿಕಾ ದೇವಿ ಜಾತ್ರೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳ ತಾಯಿ ಎಂದೇ ಹೆಸರಾಗಿರುವ ಹೊಸದುರ್ಗ –  ಹೊಳಲ್ಕೆರೆ ಗಡಿಯಲ್ಲಿ ನಾಕೀಕೆರೆ ಬಳಿ ನೆಲೆ ನಿಂತಿರುವ ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿ ಜಾತ್ರೆ ಡಿ.16 ಮತ್ತು 17 ರಂದು ನಡೆಯಲಿದೆ.

ಈಗಾಗಲೇ ನಾಕೀಕೆರೆಯ ಚಾವಡಿ ಬಳಿ ಚಪ್ಪರದ ಪೂಜೆ ನೆರವೇರಿದ್ದು, ಜಾತ್ರೆಗೆ ಭರದ ತಯಾರಿ ನಡೆಯುತ್ತಿದೆ.

- Advertisement - 

ಡಿ.16 ಮಂಗಳವಾರ ರಾತ್ರಿ 9.30ಕ್ಕೆ ಶ್ರೀ ಕೋಡಿ ಆಲದ ಕೆಂಚಮ್ಮ ದೇವಿ ನಾಕೀಕೆರೆ ಗ್ರಾಮದ ಪ್ರವೇಶ ಮಾಡಲಿದ್ದು, ಇಡೀ ರಾತ್ರಿ ಗ್ರಾಮದ ಪ್ರತಿ ಮನೆಗೆ ತೆರಳಿ ಆರತಿ, ಪೂಜೆ ಮಾಡಿಸಿಕೊಳ್ಳುವುದು ವಾಡಿಕೆ.

ಬೆಳಗಿನ ಜಾವ 5 ಗಂಟೆ ವೇಳೆಗೆ ಗ್ರಾಮದ ಹೃದಯ ಭಾಗದಲ್ಲಿರುವ ಚಾವಡಿಯಲ್ಲಿ ದೇವಿಯ ಪ್ರತಿಷ್ಠಾಪನೆ ಆಗಲಿದೆ.

- Advertisement - 

ಡಿ.17 ಬುಧವಾರ ಮಧ್ಯಾಹ್ನ ದೇವಿಗೆ ಹಿಟ್ಟಿನ ಆರತಿ ಇನ್ನಿತರೆ ಧಾರ್ಮಿಕ ಕಾರ್ಯಗಳು ನಡೆದು, ಡಿ.18 ಗುರುವಾರ ಬೆಳಗಿನ ಜಾವದ ವಿಶೇಷ ಪೂಜೆ ನಂತರ ಮೂಲಸ್ಥಾನಕ್ಕೆ ಕರೆದೊಯ್ಯಲಾಗುವುದು.

ನಾಕೀಕೆರೆ ಗ್ರಾಮದ ಹೊರವಲಯದಲ್ಲಿ, ಊರಿನ ಗಡಿ ಭಾಗದಲ್ಲಿ ಬೃಹದಾಕಾರದ ಆಲದ ಮರದ ಬುಡದಲ್ಲಿ ನೆಲೆಸಿರುವ ಕೋಡಿ ಆಲದ ಕೆಂಚಮ್ಮ ದೇವಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಆರಾಧ್ಯ ದೇವತೆ.

ಪ್ರತಿ ಮೂರು ವರ್ಷಕ್ಕೊಮ್ಮೆ ನಾಕೀಕೆರೆಯಲ್ಲಿ ದೇವಿಯ ಜಾತ್ರೆ ಅದ್ದೂರಿಯಾಗಿ ನೆರವೇರಲಿದ್ದು, ನಡುವಿನ ಒಂದು ವರ್ಷ ಊರವರೆಲ್ಲಾ ಸೇರಿ ಹೋಳಿಗೆ ತಯಾರಿಸಿ ಅನ್ನದಾಸೋಹ ಮಾಡುವುದು ಇಲ್ಲಿನ ವಿಶೇಷವಾಗಿದೆ.

ಮಕ್ಕಳ ತಾಯಿ ಎಂದೇ ಹೆಸರಾಗಿರುವ ಕೋಡಿ ಆಲದಮ್ಮನ ಬಳಿ ಮಕ್ಕಳಿಗೆ ಕಷ್ಟವಾದಾಗ ತಾಯಂದಿರು ಬೇಡಿಕೊಳ್ಳುವುದು ವಾಡಿಕೆ. ಮಕ್ಕಳಿಗೆ ದಡಾರ, ಇನ್ನಿತರೆ ಕಷ್ಟಗಳಾದಾಗ ಇಲ್ಲಿಗೆ ಕರೆತಂದು ಪೂಜೆ, ಎಡೆ ಮಾಡಿದರೆ ಎಲ್ಲ ಕಷ್ಟಗಳೂ ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಈ ಭಾಗದಲ್ಲಿ ಬಲವಾಗಿ ಬೇರೂರಿದೆ.

ಚಿತ್ರಹಳ್ಳಿ – ಮಾಡದಕೆರೆ ಮುಖ್ಯ ರಸ್ತೆಯಲ್ಲಿ ನಾಕೀಕೆರೆ ಗಡಿಯಲ್ಲಿ ಬೆಳೆದಿರುವ ಬೃಹತ್‌ಗಾತ್ರದ, ವಿಶಾಲವಾಗಿ ಚಾಚಿಕೊಂಡಿರುವ ಆಲದ ಮರವೇ ದೇವಿಗೆ ಆಲಯ.

ಸದಾ ಹಕ್ಕಿ ಪಕ್ಷಿಗಳ ಕಲರವ, ತಂಪಾದ ವಾತಾವರಣ, ಸುತ್ತಮುತ್ತಲಿನ ತೋಟಗಳು ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಸಿವೆ. ಈ ತಾಣಕ್ಕೆ ಅನೇಕರು ಹೊರಸಂಚಾರ ಬರುವುದು, ದೇವಿಗೆ ಹರಕೆ ಮಾಡಿಕೊಂಡು ಬಂದು ಅಡುಗೆ ಮಾಡಿ ಊಟ ಮಾಡಿ ಹೋಗುವುದು ನಿರಂತರವಾಗಿ ನಡೆಯುತ್ತಿರುತ್ತವೆ.

 

 

Share This Article
error: Content is protected !!
";