ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಂಪ್ರದಾಯಕ ಹರಳು ರೂಪದ ಯೂರಿಯಾ ಗೊಬ್ಬರಕ್ಕಿಂತ ನ್ಯಾನೋ ಯೂರಿಯಾ ಹೆಚ್ಚುಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳ ಮೇಲೆ ಸಿಂಪರಣೆಯಿಂದ ತ್ವರಿತವಾಗಿ ಪೋಷಕಾಂಶ ನೀಡುವುದಲ್ಲದೆ ಮಣ್ಣಿನ ಫಲವತ್ತತೆಯನ್ನು ಸಹ ಕಾಪಾಡಲು ಸಹಕಾರಿ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು.
ಕೃಷಿ ಇಲಾಖೆ, ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಪ್ರಗತಿಪರ ರೈತರಾದ ಗುಡಿಹಳ್ಳಿಯ ಬಡಗಿ ರಂಗಣ್ಣರವರ ಜಮೀನಿನಲ್ಲಿ ಜೈವಿಕ ಇಂಧನ ಮತ್ತು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಜೈವಿಕ ಇಂಧನ ಸಸಿಯಾದ ಹಿಪ್ಪೆ ಗಿಡಕ್ಕೆ ನೀರೇರೆಯುವ ಮೂಲಕ ಉದ್ಘಾಟಿಸಿ ಅವರು ಮಾಡಿದರು.
ಡೀಸಲ್‍ಗೆ ಪರ್ಯಾಯವಾಗಿ ಮತ್ತು ಪರಿಸರ ಸ್ನೇಹಿಯಾದ ಜೈವಿಕ ಇಂಧನ ಬಳಕೆಗೆ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಎಸ್‍ಜೆಎಂಐಟಿ ಜಿಲ್ಲಾ ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಮುಖ್ಯ ಸಂಯೋಜಕರು ಹಾಗೂ ಪ್ರಾಧ್ಯಾಪಕರಾದ ಡಾ. ಎ.ಎಂ.ರಾಜೇಶ್ ಮಾತನಾಡಿ, ಜೈವಿಕ ಇಂಧನವು ನವೀಕರಿಸಬಹುದಾದ ಸಸ್ಯ ಹಾಗೂ ಪ್ರಾಣಿ ಜನ್ಯಗಳಿಂದ ಉತ್ಪಾದಿಸಲಾಗುವ ದ್ರವ ರೂಪದ ಇಂಧನವಾಗಿದೆ. ಇಂಧನ ಕ್ಷೇತ್ರದಲ್ಲಿ ಬದಲಿ ಇಂಧನವಾಗಿ ಜೈವಿಕ ಇಂಧನದ ಬಳಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಾಹನಗಳು ಹಾಗೂ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜೈವಿಕ ಇಂಧನಗಳಾದ ಬಯೋ ಡೀಸೆಲ್, ಎಥನಾಲ್ ಹಾಗೂ ಬಯೋಗ್ಯಾಸ್‍ಗಳು ಜಗತ್ತಿನಾದ್ಯಂತ ಬಳಕೆಯಲ್ಲಿವೆ. ದೇಶದ ಇಂಧನ ಸುರಕ್ಷತೆ, ಪರಿಸರ ಸಂರಕ್ಷಣೆ, ಆಮದು ಮೇಲಿನ ಅವಲಂಬನೆಯ ಕಡಿತ,
ಗ್ರಾಮೀಣ ಉದ್ಯೋಗ ಸೃಜನೆ ಮತ್ತು ಕೃಷಿಗೆ ಪೂರಕವಾಗಿ ಗ್ರಾಮೀಣ ರೈತರ ಆರ್ಥಿಕ ಪರಿಸ್ಥಿತಿ ಬಲವರ್ಧನೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಮಹತ್ವದ್ದಾಗಿದೆಂದರು. ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಪರಾವಲಂಬನೆಯನ್ನು ಕಡಿಮೆ ಮಾಡಲು ನವೀಕರಿಸಬಹುದಾದ ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಮತ್ತು ಬಳಕೆಗೆ ಆದ್ಯತೆ ನೀಡಬೇಕಾಗಿದೆ ಎಂದರು.
ಜಿಲ್ಲಾ ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ವೈಜ್ಞಾನಿಕ ಸಹಾಯಕರಾದ ಸುನೀಲ್ ಅವರು ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯ ಪ್ರಾಮುಖ್ಯತೆ ಹಾಗೂ ಜೈವಿಕ ಇಂಧನ ಬೆಳೆಗಳಾದ ಹೊಂಗೆ, ಬೇವು, ಹಿಪ್ಪೆ, ಸೀಮರೂಬ ಮತ್ತು ಜಟ್ರೋಪಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿದರು. ಸ್ಪೀಚ್ ಸಂಸ್ಥೆ ಕಾರ್ಯದರ್ಶಿ ಶೇಷಣ್ಣ ಅವರು ಜೈವಿಕ ಇಂಧನ ಭವಿಷ್ಯದ ಇಂಧನವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಡಾ ಶ್ರೀಧರ್ ಮಾತನಾಡಿ, ರೈತರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಲು ರಾಸಾಯನಿಕ ಗೊಬ್ಬರಗಳ ಬಳಕೆಯೊಂದಕ್ಕೆ ಒತ್ತು ನೀಡದೆ ಕೊಟ್ಟಿಗೆ ಗೊಬ್ಬರ, ಜೀವಾಮೃತ, ಎರೆಹುಳುಗೊಬ್ಬರ, ಜೈವಿಕ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಕ್ಕೆ ಆದ್ಯತೆ ನೀಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ಉತ್ತಮ ಪರಿಸರ ಕಾಪಾಡಲು ಸಹಕರಿಯಾಗುವುದು ಎಂದರು.
ಇಫ್ಕೋ ಸಂಸ್ಥೆಯ ಚಿತ್ರದುರ್ಗದ ಕ್ಷೇತ್ರ ಅಧಿಕಾರಿಯಾದ ಗೋವಿಂದರಾಜು ಅವರು ಕೃಷಿಯಲ್ಲಿ ಕೃಷಿಯಲ್ಲಿ ನ್ಯಾನೋ ಗೊಬ್ಬರ ಮತ್ತು ನ್ಯಾನೋ ಗೊಬ್ಬರಗಳ ಬಳಕೆಯ ಪ್ರಾಮುಖ್ಯತೆ ತಿಳಿಸಿದರು.
ಹಾಲಗೊಂಡನಹಳ್ಳಿಯ ರುದ್ರಮುನಿಯಪ್ಪನವರು ಸಾವಯವ ಕೃಷಿಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಗತಿಪರ ರೈತರಾದ ಬಡಗಿ ರಂಗಣ್ಣರವರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸದ್ಭಳಕೆ ಮತ್ತು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಲಹೆಯಂತೆ ಸಮಗ್ರ ಕೃಷಿ ಪದ್ದತಿಯ ಅಳವಡಿಕೆಯಿಂದ ಸುಸ್ಥಿರ ಇಳುವರಿ ಮತ್ತು ಆದಾಯ ಪಡೆಯಲು ಸಾಧ್ಯವಾಯಿತು ಎಂದರು. ತರಬೇತಿಯ ನಂತರ ಟ್ರ್ಯಾಕ್ಟರಗೆ ಜೈವಿಕ ಇಂಧನ ಬಳಕೆ ಚಾಲನೆ ನೀಡಲಾಯಿತು.

