ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಹಾನ್ ಸನ್ಯಾಸಿ ವಿಶ್ವಗುರು ಸ್ವಾಮಿ ವಿವೇಕಾನಂದರ 164 ನೇ ಜಯಂತೋತ್ಸವದ ಅಂಗವಾಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ವಿಶೇಷವಾಗಿ ಪೂಜೆ ಸಲ್ಲಿಸಿ, ಅನ್ನದಾಸೋಹ ನಡೆಸುವ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಚಿಕ್ಕಪೇಟೆಯಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಈ ವೇಳೆ ನೆರೆದಿದ್ದ ಸಾರ್ವಜನಿಕರಿಗೆ ಅನ್ನದಾಸೋಹ ನಡೆಸಲಾಯಿತು.
ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಂಕ್ ವಿತರಣೆ, ವಯೋವೃದ್ದರಿಗೆ ಹೊದಿಕೆ ( ಬೆಡ್ ಶೀಟ್) ವಿತರಣೆ, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಣೆ, ನಗರದ ನಿರ್ಗತಿಕರಿಗೆ ಗೀತಾ ಮಂದಿರದಲ್ಲಿ ಹಾಗೂ ಪಾಲನಜೋಗಹಳ್ಳಿ ಅನಾಥಾಶ್ರಮದಲ್ಲಿ ಮಕ್ಕಳಿಗೆ ಹಣ್ಣು ವಿತರಣೆ ,
ಕಡು ಬಡವರಿಗೆ ಹಾಗೂ ನಿರ್ಗತಿಕರಿಗೆ ಅನ್ನದಾಸೋಹ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸ್ವಾಮಿ ವಿವೇಕಾನಂದರ ಜಯಂತೋತ್ಸವವನ್ನು ಆಚರಣೆ ಮಾಡಲಾಗುತ್ತದೆ ಅಂತೆಯೇ ಈ ಬಾರಿ ಶಾಲಾ ಮಕ್ಕಳ ವಿಶೇಷ ಜಾಥದೊಂದಿಗೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಖಂಡರೊಂದಿಗೆ ಪೂಜೆ ಸಲ್ಲಿಸಿ ಅನ್ನದಾಸೋಹ ನಡೆಸುವ ಮೂಲಕ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಸಾಂಕೇತಿಕವಾಗಿ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸ್ಥಳೀಯ ಭೀಮಯ್ಯ ಶಾಲೆ ಹಾಗೂ ಶ್ರೀ ಜಿ.ಕೆ ಪ್ರೌಢಶಾಲೆಯ ಮಕ್ಕಳೊಂದಿಗೆ ಇಂದಿನ ಜಯಂತಿಯನ್ನು ವಿಶೇಷವಾಗಿ ಆಚರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಟ್ರಸ್ಟ್ ನ ಮೂಲಕ ತಾಲ್ಲೂಕಿನಲ್ಲಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಲಿದ್ದೇವೆ.
ಸ್ವಾಮಿ ವಿವೇಕಾನಂದರ ಆಶಯಗಳನ್ನು ಸಮಾಜಕ್ಕೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಯುವ ಸಮುದಾಯ ಕುರಿತು ಸ್ವಾಮಿ ವಿವೇಕಾನಂದರು ಕಂಡ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಯುವ ಭಾರತ ನಿರ್ಮಾಣಕ್ಕೆ ನಮ್ಮ ಟ್ರಸ್ಟ್ ಶ್ರಮಿಸುತ್ತದೆ. ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಎಂ. ಬಿ. ಗುರುದೇವ್ ಮಾತನಾಡಿ ಯುವಕರನ್ನು ಬಡಿದೆಬ್ಬಿಸುವ ಸದೃಢ ಯುವ ದೇಶವನ್ನು ಕಟ್ಟುವ ಕಾಯಕವನ್ನು ಸ್ವಾಮಿ ವಿವೇಕಾನಂದರ ನಿರಂತರವಾಗಿ ಮಾಡಿದ್ದರು. ಭಾರತ್ ಮಾತಾ ಕೀ ಜೈ ಘೋಷಣೆ ಅವರಿಗೆ ಅತ್ಯಂತ ಪ್ರಿಯವಾದದ್ದು. ಇಂದಿನ ಯುವ ಸಮೂಹ ವಿವೇಕಾನಂದರ ಆಶಯದ ಕನಸನ್ನು ನನಸು ಮಾಡಬೇಕಾಗಿದೆ ಎಂದರು.
ಭೀಮಯ್ಯ ಶಾಲೆಯ ಮುಖ್ಯಸ್ಥೆ ಪ್ರಿಯಾಂಕಾ ಮಾತನಾಡಿ ದೇಶಾಭಿಮಾನ ಪ್ರಬುದ್ಧತೆ ಅರಿವು ಇದಕ್ಕೆ ಮತ್ತೊಂದು ಹೆಸರೇ ಸ್ವಾಮಿ ವಿವೇಕಾನಂದರು ಎಂದರೆ ತಪ್ಪಾಗಲಾರದು. ಅವರ ಜೀವಿತಾವಧಿಯಲ್ಲಿ ದೇಶದ ಯುವಕರನ್ನು ವಿದ್ಯಾರ್ಥಿಗಳನ್ನು ತಮ್ಮ ಮಾತುಗಳ ಮೂಲಕ ಎಚ್ಚರಿಸಿ ಅರಿವು ಮೂಡುವಂತೆ ಮಾಡುತ್ತಿದ್ದರು. ಅವರ ಪ್ರತಿಯೊಂದು ಮಾತು ಇಂದಿಗೂ ಅಷ್ಟೇ ಸ್ಪೂರ್ತಿದಾಯಕ. ಸ್ವಾಮಿ ವಿವೇಕಾನಂದರು ಎಂದಿಗೂ ಅಳಿಯದ ಚೇತನರು. ಅವರ ಜೀವನವೇ ಎಲ್ಲರಿಗೂ ಆದರ್ಶ ಎಂದರು.
ಈ ಸಂದರ್ಭದಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

