ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಸತಿ ಹಕ್ಕು ಜಾರಿಗಾಗಿ ಒಂದು ದಶಕದಿಂದ ಹೋರಾಟ ನಡೆಸುತ್ತಿದ್ದೇವೆ. ಸ್ಲಂ ನಿವಾಸಿಗಳಿಗೆ ತಲೆ ಮೇಲೆ ಸೂರು ಒದಗಿಸುವುದು ನಮ್ಮ ಉದ್ದೇಶವೇ ವಿನಃ ರಾಜಕೀಯವಾಗಿ ಬೇಡಿಕೆ ಈಡೇರಿಸಿಕೊಳ್ಳುವುದಲ್ಲ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಚಿತ್ರದುರ್ಗ ವತಿಯಿಂದ ಎಸ್‌ಜೆಕೆ ಸಂಘಟನೆಯ ಆಶಯ ಜಿಲ್ಲಾ ಸಮಿತಿಗೆ ಪ್ರವಾಸಿ ಮಂದಿರದಲಿ ಶನಿವಾರ ನಡೆದ ಪದಾಧಿಕಾರಿಗಳ ಆಯ್ಕೆ ಹಾಗೂ ಕಾನೂನು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೂಲಭೂತ ಸೌಲಭ್ಯಗಳಿಲ್ಲದೆ ಇನ್ನು ಎಷ್ಟು ವರ್ಷಗಳ ಕಾಲ ಸ್ಲಂಗಳಲ್ಲಿ ವಾಸಿಸುತ್ತೀರ? ಮನೆಗಳನ್ನು ಕಟ್ಟಿಸಿಕೊಳ್ಳಲು ಒಂದು ಲಕ್ಷ ರೂ.ಗಳ ಡಿಪಾಸಿಟ್ ಮಾಡಬೇಕೆಂದು ರಾಜ್ಯ ಸರ್ಕಾರ ಷರತ್ತು ಹಾಕಿದೆ. ರಾಜ್ಯದಲ್ಲಿ ೩೬ ಸಾವಿರ ಮನೆಗಳನ್ನು ಕಟ್ಟಲಾಗಿದೆ. ಒಂದು ಲಕ್ಷ ೨೪ ಸಾವಿರ ಮನೆಗಳು ಅತಂತ್ರವಾಗಿವೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡುವರೆ ವರ್ಷಗಳ ಅಧಿಕಾರವಧಿ ಮುಗಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದರು.
ದೇಶದ ಸಂಪತ್ತು ಪ್ರತಿ ಬಡವರಿಗೆ ಸಿಗಬೇಕೆನ್ನುವುದಕ್ಕಾಗಿ ನಮ್ಮ ಹೋರಾಟ. ಪ್ರಣಾಳಿಕೆ ಆಧಾರದ ಮೇಲೆ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತೇವೆ. ಸ್ಲಂ ಜನರನ್ನು ೨ ನೇ ದರ್ಜೆ ನಾಗರೀಕರನ್ನಾಗಿ ಕಾಣುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಸಂವಿಧಾನದ ಆಶಯದಂತೆ ನಿಮ್ಮ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುವವರಿಗೆ ಚುನಾವಣೆಯಲ್ಲಿ ಮತ ನೀಡಿ ಎಂದು ಸ್ಲಂ ನಿವಾಸಿಗಳಲ್ಲಿ ಮನವಿ ಮಾಡಿದರು.
ಉದ್ಯಮಿ ಬಾಳೆಕಾಯಿ ಶ್ರೀನಿವಾಸ್ ಮಾತನಾಡುತ್ತ ಪದಾಧಿಕಾರಿಗಳಾದ ಕೂಡಲೆ ಕೆಲವರು ಶಾಸಕರುಗಳ ಹಿಂದೆ ಬಿದ್ದು ಸ್ಲಂ ನಿವಾಸಿಗಳನ್ನು ಕಡೆಗಣಿಸುವುದು ಅತ್ಯಂತ ನೋವಿನ ಸಂಗತಿ. ಕಟ್ಟ ಕಡೆಯ ಪ್ರಜೆಗೂ ಸಂವಿಧಾನದಡಿ ಹಕ್ಕಿದೆ. ಚುನಾವಣೆಯಲ್ಲಿ ನೋಟಿಗಾಗಿ ಓಟನ್ನು ಮಾರಿಕೊಳ್ಳಬೇಡಿ. ನಿಮ್ಮ ಕುಂದು ಕೊರತೆ, ಸಮಸ್ಯೆಗಳನ್ನು ಯಾರು ಆಲಿಸಿ ಪರಿಹರಿಸುತ್ತಾರೋ ಅಂತಹ ಯೋಗ್ಯರಿಗೆ ಮತ ನೀಡಿ ಎಂದು ಜಾಗೃತಿಗೊಳಿಸಿದರು.
ಸ್ಲಂ ಜನಾಂದೋಲನ ಕರ್ನಾಟಕಕ್ಕೆ ಪದಾಧಿಕಾರಿಗಳಾಗಿ ಆಯ್ಕೆಯಾದ ಕೂಡಲೆ ಅಹಂ ಬರಬಾರದು. ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಂದ ಸಾಲ ಪಡೆದುಕೊಂಡ ಮಹಿಳೆಯರು ಬಡ್ಡಿ ಕಟ್ಟಲು ಆಗದೆ ಬೀದಿಗೆ ಬಂದಿದ್ದಾರೆ. ನಿಮ್ಮ ಹಿತಕ್ಕಾಗಿ ಸಂಘಟನೆಗೆ ಒತ್ತು ಕೊಡಿ ಎಂದು ಸ್ಲಂನ ಮಹಿಳೆಯರಿಗೆ ಕರೆ ನೀಡಿದರು.
ಕುಂಚಿಗನಾಳ್ ಮಹಲಿಂಗಪ್ಪ ಮಾತನಾಡಿ ಅಲೆಮಾರಿ, ಅರೆಅಲೆಮಾರಿಗಳು, ಬುಡುಗ ಜಂಗಮರು ಮನೆಯಿಲ್ಲದೆ ಬೀದಿ ಬದಿ ಟೆಂಟ್‌ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ನಿಜವಾಗಿಯೂ ಇಂತಹ ಕಡು ಬಡವರಿಗೆ ಒಳ ಮೀಸಲಾತಿಯ ಉಪಯೋಗ ಸಿಗಬೇಕು. ಹೋರಾಟದಿಂದ ಮಾತ್ರ ಸಂವಿಧಾನದಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಹಾಗಾಗಿ ಸಂಘಟನೆಗೆ ಶಕ್ತಿ ತುಂಬಿ ಎಂದು ವಿನಂತಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಪಾಪಣ್ಣ ಕೆ. ಮಾತನಾಡುತ್ತ ದೇಶದ ಪ್ರಜೆಗಳಾಗಿರುವ ನಿಮಗೂ ಮತದಾನದ ಹಕ್ಕಿದೆ. ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸ್ಲಂ ಪ್ರದೇಶದಲ್ಲೆ ವಾಸಿಸಬೇಡಿ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬರಿಗೂ ಸಮಾನತೆ ನೀಡಿದ್ದಾರೆ. ನೀರು, ಬೀದಿ ದೀಪ, ರಸ್ತೆ, ಚರಂಡಿ, ಶೌಚಾಲಯ, ಪಡಿತರ ಚೀಟಿಗಳನ್ನು ಪಡೆದುಕೊಳ್ಳಲು ಸಂಘಟನೆ ಹೋರಾಟ ಮುಖ್ಯ ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕಿ ಬೈಲಮ್ಮ, ರೇಣುಕ ಯಲ್ಲಮ್ಮ, ಲಕ್ಷ್ಮಮ್ಮ ಇವರುಗಳು ಮಾತನಾಡಿದರು. ಎಸ್‌ಜೆಕೆ ರಾಜ್ಯ ಸಮಿತಿ ಸದಸ್ಯ ಕೆ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯ ಸುಧಾ ಡಿ. ಪೂರ್ಣಿಮ ಎನ್.ಎಂ. ಇನ್ನು ಅನೇಕರು ವೇದಿಕೆಯಲ್ಲಿದ್ದರು.

