ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು
ಬುಡಕಟ್ಟು ಜನರ ಅಸ್ಮಿತೆ!!
ಭಾವನೆಗಳ ಬಹು ಮಹಡಿ ।ನನ್ನ ಜನರ ಗುಡಿ,
ನೆಲ ಮೂಲದ ಬುಡಕಟ್ಟು ಜನರು
ವೃಕ್ಷಕ್ಕೆ ಚೀರ ಕಟ್ಟಿ,
ಕೊಟ್ಟರು
ಮಾರಿ- ಮಲಿಯವ್ವಗೆ ಮುಡಿ॥
ಬೆಟ್ಟಕ್ಕೆ ಸೀರೆ ಉಡಿಸಿ ದೇವರ ಮಾಡಿದ್ದರೆ
ಕ್ರಷರ್ ಗಳ ಸದ್ದಾದರೂ ಅಡಗುತ್ತಿತ್ತು!
ಬ್ರಾಹ್ಮಿ ಮುಹೂರ್ತದಿ ಹಳ್ಳ
ಕೊಳ್ಳಗಳಿಗೆ ದಾರ ಸುತ್ತಿ
ಪೂಜಿಸುವಂತಿದ್ದರೆ ಮರಳುಗಳ್ಳರ
ಸೊಲ್ಲಾದರೂ ನಿಲ್ಲುತ್ತಿತ್ತು!……….
ಪ್ರಕೃತಿಯ ಆರಾಧಕರು ನನ್ನ
ಜನ ಬಲು ಮುಗ್ದರು,
ಸೀರಣವ ಹೆಗಲಿಗೇರಿಸಿದ ಕಣ್ಣಪ್ಪ
ಅಂಧಭಕ್ತೀಲಿ ಶಿವನಿಗೆ ಕಣ್ಣು ಕೊಟ್ಟ ,
ಗುರುಭಕ್ತಿಯ ಹೆಸರಲ್ಲಿ ಬ್ರಾಹ್ಮಣ್ಯ
ಏಕಲವ್ಯನ ಹೆಬ್ಬೆರಳು ಕತ್ತರಿಸಿತು,
ನೀರಿನ ವ್ಯಾಜ್ಯಕ್ಕೆ ಸಿದ್ದಾರ್ಥನು ರಾಜ್ಯ ತೊರೆದ,
ವರ್ಣಸಂಕರವಾಯ್ತೆಂದು ಬಸವಣ್ಣ
ಪದವಿ ಕಳೆದುಕೊಂಡ.
ಬೋಧಿ ವೃಕ್ಷದಡಿ
ಧ್ಯಾನಿಸಿ ಎದ್ದವನು
ಜ್ಞಾನೋದಯದ ಬುದ್ಧನಾದ!
ಕ್ರಿಸ್ತನು ಶಿಲುಬೆ ಎಂಬ ಮರವೇರಿ
ಜಗದ ತಮಂದವ ಬೆಳಗಿದ …!
ಬಸವಣ್ಣನ ವಚನ ಚಳುವಳಿಯಿಂದ
ಲೋಕದ ಡೊಂಕ ತಿದ್ದಿದ…!
ಕವಿ ಕುವೆಂಪು ಸುತ ಪೂಚಂತೇ ಆರಾಧಿಸಿ
ಬರೆದದ್ದು ಹಸಿರ ವನ ರಾಶಿ!
ಸಾಲುಮರದ ತಿಮ್ಮಕ್ಕ
ವೃಕ್ಷದೊಳಗೆ ಲಕ್ಷವ ಬೆಳೆದು
ಮರದೊಳಗೆ ಮನೆ ಮಾತಾದಳು.॥
ಕವಿತೆ-ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು