ರೈತರಿಗೆ ಅನ್ಯಾಯವಾದರೆ ಸಿಡಿದೇಳುತ್ತಿದ್ದ ಎನ್.ಡಿ.ಸುಂದರೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತರಿಗೆ ಅನ್ಯಾಯವಾದರೆ ಸಿಡಿದೇಳುತ್ತಿದ್ದ ಎನ್.ಡಿ.ಸುಂದರೇಶ್ ದಿಟ್ಟ ಹೋರಾಟಗಾರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಸ್ಮರಿಸಿದರು.

ರೈತ ನಾಯಕ ಎನ್.ಡಿ.ಸುಂದರೇಶ್‌ರವರಿಗೆ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸ್ಮರಣೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ್, ಹೆಚ್.ಎಸ್.ರುದ್ರಪ್ಪನವರ ಸಮಕಾಲೀನರಾಗಿದ್ದ ಎನ್.ಡಿ.ಸುಂದರೇಶ್ ಸರಳ ವ್ಯಕ್ತಿತ್ವದವರು. ರೈತರ ಸಂಘಟನೆಗಾಗಿ ಹಳ್ಳಿ ಹಳ್ಳಿಗೆ ತಿರುಗುತ್ತಿದ್ದರು. ರೈತ ಬೆವರಿನಿಂದ ಕಟ್ಟಿದ ಕರ್ನಾಟಕ ರಾಜ್ಯ ರೈತ ಸಂಘ ಈಗ ಅನೇಕ ಬಣಗಳಾಗಿರುವುದು ನೋವಿನ ಸಂಗತಿ. ಸುಂದರೇಶ್‌ರವರ ಆಸೆಯಂತೆ ಎಲ್ಲರೂ ಒಂದಾಗಬೇಕು ಎಂದು ಮನವಿ ಮಾಡಿದರು.

ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ ಮಾತನಾಡಿ ನರಗುಂದ, ನವಲಗುಂದದಲ್ಲಿ ತಹಶೀಲ್ದಾರ್ ಜೀಪಿಗೆ ಅಡ್ಡ ಮಲಗಿದ ರೈತರ ಮೇಲೆ ವಾಹನ ಹರಿದ ಪರಿಣಾಮ ಕೆಲವು ರೈತರು ಮೃತಪಟ್ಟಾಗ ಎನ್.ಡಿ.ಸುಂದರೇಶ್ ಅಲ್ಲಿ ಹೋರಾಟಕ್ಕೆ ಇಳಿದರು. ಪ್ರತಿವರ್ಷವೂ ರೈತ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅನೇಕ ಸಾರಿ ಸೆರೆಮನೆ ವಾಸ ಅನುಭವಿಸಿದ್ದೇವೆ. ವಿಭಜನೆಯಾಗಿರುವ ರೈತ ಬಣಗಳೆಲ್ಲಾ ಒಂದಾಗಿ ಎನ್.ಡಿ.ಸುಂದರೇಶ್‌ರವರ ಹೋರಾಟದ ಹಾದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.

ಚಿಕ್ಕಬ್ಬಿಗೆರೆ ನಾಗರಾಜ್ ಮಾತನಾಡುತ್ತ ರೈತರಲ್ಲಿ ಹೋರಾಟದ ಕಿಚ್ಚು ಹಚ್ಚಿದವರು ಎನ್.ಡಿ.ಸುಂದರೇಶ್. ಅವರ ಹಾದಿಯಲ್ಲಿ ರೈತರು ಹೋರಾಟ ಮಾಡಬೇಕಿದೆ. ಪ್ರೊ.ನಂಜುಂಡಸ್ವಾಮಿರವರ ಸಮಕಾಲೀನರಾಗಿದ್ದ ಎನ್.ಡಿ.ಸುಂದರೇಶ್‌ರವರ ಆಸೆಯಂತೆ ಎಲ್ಲಾ ರೈತ ಬಣಗಳು ಒಂದಾಗಬೇಕೆಂದರು.

ರೈತ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ ಪ್ರತಿಯೊಬ್ಬ ರೈತನು ಎನ್.ಡಿ.ಸುಂದರೇಶ್‌ರವರ ಹೋರಾಟದ ಹಾದಿಯಲ್ಲಿ ಸಾಗಬೇಕು. ಶುದ್ದ ಹಸ್ತ, ನೇರ ನಡೆ ನುಡಿಯ ನಿಷ್ಟುರವಾದಿ ಹೋರಾಟಗಾರರಾಗಿದ್ದ ಅವರನ್ನು ರೈತರು ಸ್ಮರಿಸಿಕೊಳ್ಳಬೇಕಿದೆ. ಜಾಗತಿಕ ತಾಪಮಾನದ ಪರಿಣಾಮ ರೈತರು ಜ್ವಲಂತ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ರೈತರು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯಬೇಕೆಂದು ವಿನಂತಿಸಿದರು.

ಮತ್ತೊಬ್ಬ ರೈತ ಮುಖಂಡ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡುತ್ತ ರೈತರ ಹೆಗಲಮೇಲಿರುವ ಹಸಿರುಶಾಲು ದೇಶದೆಲ್ಲೆಡೆ ಗುರುತಿಸಿಕೊಂಡಿದೆ ಎಂದರೆ ಅದಕ್ಕೆ ರೈತ ನಾಯಕ ಎನ್.ಡಿ.ಸುಂದರೇಶ್‌ರವರ ಹೋರಾಟವೇ ಕಾರಣ. ಹೋಳಾಗಿರುವ ಎಲ್ಲಾ ರೈತ ಬಣಗಳು ಒಂದಾದರೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ ಎಂದರು.

ರೈತರುಗಳಾದ ಮರ್‍ಲಹಳ್ಳಿ ರವಿಕುಮಾರ್, ನಾಗರಾಜ್ ಮುದ್ದಾಪುರ, ಎಂ.ಬಿ.ಪ್ರಶಾಂತ್‌ರೆಡ್ಡಿ, ಹೊನ್ನೂರು ಶ್ರೀನಿವಾಸ್, ಸಿದ್ದಬಸಣ್ಣ, ಎಂ.ಸಿ.ಚನ್ನಕೇಶವ, ಬಿ.ಸುರೇಶ್, ಅಜ್ಜಣ್ಣ

ಶಿವಣ್ಣ, ಅಂಬರೇಶ್, ಡಿ.ಟಿ.ಮಂಜಣ್ಣ ಹಿರೇಹಳ್ಳಿ, ಹಿರೇಹಳ್ಳಿ ತಿಪ್ಪೇಸ್ವಾಮಿ, ಕೆ.ಎಸ್.ಕೊಟ್ರಬಸಪ್ಪ, ಕೆ.ಎಂ.ಕಾಂತರಾಜು, ಎನ್.ತಿಪ್ಪೇಸ್ವಾಮಿ ಇವರುಗಳು ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

- Advertisement -  - Advertisement - 
Share This Article
error: Content is protected !!
";