ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೆರೆ, ಮಳೆ ಹೇಳಿ ಬರುವುದಿಲ್ಲ, ನಿಜ. ಈ ಪ್ರಾಕೃತಿಕ ವಿಕೋಪ ಪ್ರತೀ ವರ್ಷ ಮರುಕಳಿಸುತ್ತಿದೆ. ಆದರೆ; ಜನರು- ಜನಜೀವನವನ್ನು ರಕ್ಷಿಸುವ ಯಾವುದೇ ಮುಂದಾಲೋಚನೆ, ದೂರದೃಷ್ಟಿ ಸರಕಾರಕ್ಕಿಲ್ಲ. ʼಯುದ್ಧಕಾಲೇ ಶಸ್ತ್ರಾಭ್ಯಾಸʼ ಎಂಬಂತೆ ಆಡಳಿತಗಾರರು ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಜೆಡಿಎಸ್ ಟೀಕಿಸಿದೆ.
ಪ್ರಕೃತಿ ವಿಕೋಪಗಳ ಕುರಿತು ರಾಜಕೀಯ ಖಂಡಿತ ಕೂಡದು. ಆದರೆ, ಆಡಳಿತ ನಡೆಸುವವರ ಅಸಡ್ಡೆ-ಉಪೇಕ್ಷೆ ಸಹಿಸಲು ಸಾಧ್ಯವಿಲ್ಲ. ಕಲಬುರಗಿ ಸೇರಿ ಉತ್ತರದ ಎಲ್ಲಾ ಜಿಲ್ಲೆಗಳಲ್ಲಿ ಸಂಭವಿಸಿರುವ ಪರಿಸ್ಥಿತಿ ನೋಡಿದರೆ ಗಾಬರಿ ಆಗುತ್ತದೆ. ಹಳ್ಳಿಗಳಿಗೆ ಹಳ್ಳಿಗಳೇ ನದಿ ನೆರೆಗೆ ಸಿಕ್ಕಿ ಮುಳುಗಿವೆ. ಜಲಾವೃತಗೊಂಡ ಹಳ್ಳಿಗಳ ದೃಶ್ಯಗಳನ್ನು ಕಂಡರೆ ಮೈ ನಡುಗುತ್ತದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಸರಕಾರ ತುರ್ತಾಗಿ ಇಷ್ಟನ್ನು ಮಾಡಲೇಬೇಕು-
ಭವಿಷ್ಯದಲ್ಲಿ ಈ ಎಲ್ಲಾ ನೆರೆಪೀಡಿತ ಗ್ರಾಮಗಳನ್ನು ರಕ್ಷಿಸಲು ಸಮಗ್ರ ಯೋಜನೆ ರೂಪಿಸಬೇಕು.
ಸರಕಾರ ಸಮರೋಪಾದಿಯಲ್ಲಿ ನೆರೆಪೀಡಿತರಿಗೆ ಆಹಾರ, ನೀರು, ಔಷಧಿ ಸೇರಿ ಇತ್ಯಾದಿ ತುರ್ತು ಸೌಲಭ್ಯಗಳನ್ನು ಕಲ್ಪಿಸಬೇಕು. ಗಂಜಿ ಕೇಂದ್ರಗಳನ್ನು ಕ್ಷಿಪ್ರವಾಗಿ ತೆರೆಯಬೇಕು.
ಪರಿಕಾರ ಕಾರ್ಯಗಳಿಗೆ ಉಸ್ತುವಾರಿಗಳನ್ನಾಗಿ ಹಿರಿಯ ಸಚಿವರನ್ನು ನೇಮಿಸಿ, ಅವರ ಸಹಕಾರಕ್ಕೆ ದಕ್ಷ ಅಧಿಕಾರಿಗಳ ತಂಡಗಳನ್ನು ನಿಯೋಜಿಸಬೇಕು. ಬೆಳೆ ನಷ್ಟವನ್ನು ತುರ್ತಾಗಿ ಅಂದಾಜಿಸಿ ತತ್ ಕ್ಷಣವೇ ರೈತರಿಗೆ ಪರಿಹಾರ ನೀಡಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.
ಪ್ರಾಣ ನಷ್ಟ, ಜಾನುವಾರು-ಆಸ್ತಿ ನಷ್ಟ ಅನುಭವಿಸಿರುವ ಕುಟುಂಬಳಿಗೆ ಕೂಡಲೇ ಪರಿಹಾರ ನೀಡಿಮುಖ್ಯಮಂತ್ರಿಗಳು ತುರ್ತಾಗಿ ಇಷ್ಟೂ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸ್ವತಃ ತಾವೇ ಇಡೀ ಪರಿಸ್ಥಿತಿಯ ಮೇಲೆ ನಿಗಾ ವಹಿಸಿ ನಿರ್ವಹಿಸಬೇಕು ಎಂದು ಜೆಡಿಎಸ್ ತಾಕೀತು ಮಾಡಿದೆ.

