ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಳವಂಗಲ ಹಾಗೂ ಸಾಸಲು ಹೋಬಳಿಯಲ್ಲಿ ಟೆರ್ರ ಫಾರಂ ಎಂ ಎಸ್. ಜಿ. ಪಿ. ತ್ಯಾಜ್ಯ ಘಟಕವನ್ನು ಜಾಗ ವಿಸ್ತರಿಸಿ ಪುನರಾರಂಭ ಮಾಡಲು ಸರ್ಕಾರ ನಿರ್ಧರಿಸಿರುವುದಾಗಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಇದರ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದೆಂದು ಜಿ. ಎನ್. ಪ್ರದೀಪ್ ಕುಮಾರ್ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ನವ ಬೆಂಗಳೂರು ಹೋರಾಟ ಸಮಿತಿ ಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ ಈಗಾಗಲೇ ಟೆರ್ರ ಫಾರಂ ತ್ಯಾಜ್ಯ ಸಂಸ್ಕರಣೆ ಹೆಸರಲ್ಲಿ ದಶಕಗಳಿಗಾಗುವಷ್ಟು ಬೆಂಗಳೂರಿನ ಕಸವನ್ನು ತಂದು ಸುರಿದು ತಾಲೂಕಿಗೆ ಅಪಾರವಾದ ಕೊಡುಗೆ ಕೊಟ್ಟಿದೆ. ತಾಲೂಕಿನ ಹೋರಾಟಗಾರರ ವಿರೋದಕ್ಕೆ ಮಣಿದು ತ್ಯಾಜ್ಯ ಸಂಸ್ಕರಣ ಘಟವನ್ನು ಮುಚ್ಚಲಾಗಿತ್ತು. ಈಗ ಮತ್ತೆ ತಾಲೂಕಿನಲ್ಲಿ ಬೆಂಗಳೂರಿನ ಕಸವನ್ನು ಸುರಿಯುವ ಪ್ರಕ್ರಿಯೆ ಪ್ರಾರಂಭವಾಗುವ ಸೂಚನೆಯನ್ನು ವಿಧಾನ ಸಭೆ ಅದಿವೇಶನದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ.
ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜುರವರು ಸದನದಲ್ಲಿಯೇ ವಿರೋಧ ವ್ಯಕ್ತ ಪಡಿಸಿರುವುದು ಶ್ಲಾಘನೀಯ ಸಂಗತಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರ ವನ್ನು ಬೆಂಗಳೂರಿನ ಕಸದ ತೊಟ್ಟಿ ಮಾಡಲು ಸರ್ಕಾರ ಹೊರಟಿರುವುದ ಕಂಡನಿಯ. ಹಿಂದಿನ ಸರ್ಕಾರಗಳ ತಪ್ಪು ನೀತಿಯಿಂದಾಗಿ ಕಸದ ಸಮಸ್ಯೆಯಿಂದ ಸಾಸಲು ಮತ್ತು ಬೆಳವಂಗಲ ಹೋಬಳಿ ಕೃಷಿ ಜಮೀನುಗಳು ಹಾಳಾಗಿ ರೈತರು ಬೀದಿಗೆ ಬಿದ್ದಿದ್ದಾರೆ. ಇಲ್ಲಿಯ ನೀರು ಕುಡಿಯಲು ಸಹಾ ಯೋಗ್ಯವಾಗಿಲ್ಲ. ಜೊತೆಗೆ ಇದರಿಂದಾಗಿ ಈ ಭಾಗದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿರುವ ಸಾಕಷ್ಟು ಉದಾಹರಣೆ ಕಣ್ಣ ಮುಂದಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಟೆರ್ರ ಫಾರಂ ನ ಕಸದ ತ್ಯಾಜ್ಯ ಘಟದ ವಿರುದ್ಧ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ತೀವ್ರವಾದ ಹೋರಾಟವನ್ನು ಮಾಡಿ ಕಸ ಸುರಿಯುವಿಕೆಯನ್ನು ನಿಲ್ಲಿಸಿದ್ದರು. ಈಗ ಟೆರ್ರ ಫಾರಂ ತ್ಯಾಜ್ಯ ಘಟಕ ಮತ್ತೆ ಕಸ ಸಂಸ್ಕರಣೆಯ ಹೆಸರಲ್ಲಿ ಎರಡು ಹೋಬಳಿಗಳ ಮತ್ತಷ್ಟು ಕೃಷಿ ಭೂಮಿಯನ್ನು ಹಾಳು ಮಾಡಲು ಹೊರಟಿದೆ. ಕಳೆದೆರಡು ಅವಧಿಯ ಶಾಸಕರಾಗಿದ್ದವರು ಈ ಸಮಸ್ಯೆಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸದೇ ಉದಾಸೀನ ತೋರಿದ ಪರಿಣಾಮ ಈಗ ಎರಡು ಹೋಬಳಿಯ ಜನ ಪರಿತಪಿಸುವಂತಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನ ಕಸವನ್ನು ನಮ್ಮ ತಾಲೂಕಿನಲ್ಲಿ ಸುರಿಯಲು ಬಿಡುವುದಿಲ್ಲ. ಇದರ ಬಗ್ಗೆ ಸರ್ಕಾರಕ್ಕೆ ತೀವ್ರ ತರಹದ ಎಚ್ಚರಿಕೆ ಕೊಡುತ್ತಿದ್ದೇವೆ. ನಮ್ಮ ತಾಲೂಕಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ನವ ಬೆಂಗಳೂರು ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ರೈತಪರ, ಕನ್ನಡ ಪರ, ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪಕ್ಷತೀತವಾಗಿ ಉಗ್ರವಾದ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಪ್ರದೀಪ್ ಕುಮಾರ್ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಭಕ್ತರಹಳ್ಳಿ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಪಿ. ರಾಜು ನಾಯಕ್, ಮದು ಹಾಜರಿದ್ದರು.

