ಹೊಸ ಕೈಗಾರಿಕ ನೀತಿ ಜಾರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರವನ್ನು ದೇಶದಲ್ಲಿಯೇ ಅಭೂತಪೂರ್ವ ಮಾದರಿಯಲ್ಲಿ ಮುನ್ನಡೆಸುವ ಉದ್ದೇಶದಿಂದ ಹೊಸ ಕರ್ನಾಟಕ ಕೈಗಾರಿಕಾ ನೀತಿ, 2025-30 ಅನ್ನು ಜಾರಿಗೆ ತರಲಾಗಿದೆ. ಬಂಡವಾಳ ಹೂಡಿಕೆಯಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದೆ. 2024-25ನೇ ಸಾಲಿನಲ್ಲಿ ಏಪ್ರಿಲ್ 2024 ರಿಂದ ಸೆಪ್ಟೆಂಬರ್ 2024ರ ಅಂತ್ಯದವರೆಗೆ ರಾಜ್ಯವು 88,853 ಮಿಲಿಯನ್ ಡಾಲರುಗಳಷ್ಟು ಮೌಲ್ಯದ ಸರಕು ಸೇವೆಗಳನ್ನು ರಫ್ತು ಮಾಡುವುದರೊಂದಿಗೆ ಒಟ್ಟಾರೆ ರಫ್ತಿನಲ್ಲಿ 1ನೇ ಸ್ಥಾನದಲ್ಲಿದೆ. 2023-24ಕ್ಕೆ ಹೋಲಿಸಿದರೆ ರಫ್ತಿನಲ್ಲಿ ರಾಜ್ಯವು ಶೇ. 11.17 ರಷ್ಟು ಏರಿಕೆಯ ಪ್ರಗತಿಯನ್ನು ಸಾಧಿಸಿದೆ.

ಹೊಸದಾಗಿ ಬೆಂಗಳೂರು ಹೊರವಲಯದಲ್ಲಿ ರೂ.40,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಕ್ವಿನ್ ಸಿಟಿ (Knowledge, Wellness and Innovation (KWIN) City) ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದರಿಂದಾಗಿ ಸುಮಾರು 80,000 ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದೆಂದು ಅಂದಾಜಿಸಲಾಗಿದೆ.

ಎಂ.ಎಸ್.ಎಂ.ಇ ವಲಯವು ವ್ಯಾಪಕ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ವಲಯವಾಗಿದೆ. ಈ ವಲಯವು ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನನ್ನ ಸರ್ಕಾರವು ಈ ವಲಯದ ಅಭಿವೃದ್ಧಿಗಾಗಿ 687 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಕಲಬುರಗಿಯಲ್ಲಿ ಜವಳಿ ಪಾರ್ಕ್ :
ಕಲಬುರಗಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.51 ಹಾಗೂ ಶೇ.49 ರ ಜಂಟಿ ಸಹಭಾಗಿತ್ವದಲ್ಲಿ 1000 ಎಕರೆ ಜಾಗದಲ್ಲಿ, ಜವಳಿ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ. ಈ ಸಂಬಂಧ ವಿವಿಧ ಮೂಲಭೂತ ಕಾಮಗಾರಿಗಳಿಗೆ ರೂ. 390 ಕೋಟಿ ಅನುದಾನವನ್ನು ನೀಡಲು ಸಚಿವ ಸಂಪುಟವು ಅನುಮೋದನೆ ನೀಡಿದೆ. ಇದರಿಂದಾಗಿ 1 ಲಕ್ಷ ನೇರ ಉದ್ಯೋಗಗಳು ಸೃಜನೆಯಾಗಬಹುದೆಂದು ಅಂದಾಜಿಸಲಾಗಿದೆ. ನೇಕಾರ ಸಮ್ಮಾನ್ ಯೋಜನೆಯಡಿ 2024-25ನೇ ಸಾಲಿಗೆ 1,16,189 ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಒಟ್ಟು ರೂ.81 ಕೋಟಿಗಳ ಅನುದಾನ ಹಂಚಿಕೆ ಮಾಡಲಾಗಿದ್ದು, ನೇರ ನಗದು ವರ್ಗಾವಣೆ ಮುಖಾಂತರ ಬಿಡುಗಡೆ ಮಾಡುತ್ತಿದೆ.

 

Share This Article
error: Content is protected !!
";