ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಕಟ್ಟಡವನ್ನು ಆರು ತಿಂಗಳೊಳಗೆ ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4 ರ ಕುಂಚಿಗನಾಳ್ ಕಣಿವೆಯ ಸಮೀಪ ನಿರ್ಮಿಸಲಾಗುತ್ತಿರುವ ನೂತನ ಜಿಲ್ಲಾಡಳಿತ ಭವನದ ಕಟ್ಟಡ ನಿರ್ಮಾಣ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಕೆಲಸ ಆಮೆಗತಿಯಲ್ಲಿ ಸಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರೂ.25 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಆದರೆ ಕಟ್ಟಡಕ್ಕೆ ಈಗಾಗಲೇ ರೂ.47 ಕೋಟಿ ವೆಚ್ಚವಾಗಿದೆ. ಇದರ ಜೊತೆಗೆ ಇನ್ನೂ ರೂ.15 ಕೋಟಿ ಹೆಚ್ಚುವರಿ ಅನುದಾನ ಬೇಡಿಕೆಯ ಪರಿಸ್ಥಿತಿ ಇದೆ.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಕಟ್ಟಡದಲ್ಲಿನ ಕೆಲವು ಲೋಪದೋಷಗಳನ್ನು ಉಲ್ಲೇಖಿಸಿ, ಕಂದಾಯ ಸಚಿವರು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಇಂದು ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ಜಿಲ್ಲಾ ಉಸ್ತುವಾರಿ ಸಚಿವರ ಒತ್ತಾಯಕ್ಕೆ ಅನುಗುಣವಾಗಿ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ನೂತನ ಜಿಲ್ಲಾಧಿಕಾರಿಗಳ ಕಚೇರಿ ಚಿತ್ರದುರ್ಗ ನಗರದಿಂದ ತುಂಬಾ ದೂರ ಹಾಗೂ ಗುಡ್ಡದಲ್ಲಿ ಇದ್ದು, ಇಂತಹ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಈ ಭಾಗದಲ್ಲಿ ನೀರಿನ ಸೌಲಭ್ಯವೂ ಸಹ ಬಹಳ ಕಡಿಮೆ, ಕಟ್ಟಡ ನಿರ್ಮಾಣದ ಯೋಜನೆ ರೂಪಿಸುವಾಗ ರೂ.25 ಕೋಟಿಗೆ ಯೋಜನೆ ರೂಪಿಸಲಾಗಿತ್ತು, ಬಳಿಕ 47 ಕೋಟಿ ರೂ. ಅಂದಾಜಿಗೆ ಅನುಮೋದನೆ ಪಡೆಯಲಾಗಿದೆ.
ಕಟ್ಟಡ ಸ್ಥಳದ ಗುಡ್ಡ ನೆಲಸಮ ಮಾಡಲಿಕ್ಕಾಗಿಯೇ ರೂ.10 ಕೋಟಿಗೂ ಹೆಚ್ಚು ಹಣ ವ್ಯಯಿಸಲಾಗಿದೆ. ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸದೇ, ಅಸಮರ್ಪಕವಾದ ಅಂದಾಜು ಮಾಡಿ, ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಬೇಕಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣವನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಆದಷ್ಟು ಕಾರ್ಯಾರಂಭ ಮಾಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ, ಕಟ್ಟಡ ಕಾಮಗಾರಿಯನ್ನು ಗುಣಮಟ್ಟದಲ್ಲಿ ಕೈಗೊಳ್ಳಬೇಕು, ಕಟ್ಟಡದಲ್ಲಿ ವಿವಿಧ ಇಲಾಖೆಗಳಿಗೆ, ಸಾರ್ವಜನಿಕರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜಿತ ರೀತಿಯಲ್ಲಿಯೇ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.