ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ನಮ್ಮ ಸಂಸ್ಥೆಗಳ ವಾರ್ಷಿಕ ವಹಿವಾಟು 2,000 ಕೋಟಿ ರೂ.ಗೂ ಅಧಿಕ ಇದೆ. ಹೀಗಿರುವಾಗ ಇಡಿ ದಾಳಿಯಲ್ಲಿ ಸಿಕ್ಕಿದೆ ಎನ್ನಲಾದ 2 ಕೋಟಿ ರೂ. ನಗದು ನಮಗೆ ದೊಡ್ಡ ಮೊತ್ತವೇ ಅಲ್ಲ" ಎಂದು ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ತಮ್ಮ ಹಾಗೂ ತಮ್ಮ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಡೆಸಿದ ದಾಳಿಯ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ.
"ಇಡಿ ದಾಳಿ ವೇಳೆ ನಮ್ಮ ಮನೆಯಲ್ಲಿ ಪತ್ತೆಯಾದ 2 ಕೋಟಿ ರೂ. ಹಣ ನಮ್ಮದೇ ಆಗಿದ್ದು, ಅದನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುತ್ತೇವೆ. ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ ರೂಪಿಸಿದ್ದೆವು. ಸದ್ಯ ಇನ್ನೂ ಹೂಡಿಕೆ ಮಾಡದಿದ್ದರೂ, ಆ ಪ್ರಕ್ರಿಯೆಯಲ್ಲಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದರು.
ವಿದೇಶಿ ಹೂಡಿಕೆ ವಿಚಾರವನ್ನು ಮುಂದಿಟ್ಟುಕೊಂಡೇ ತಮ್ಮ ಮೇಲೆ ಈ ದಾಳಿ ನಡೆಸಲಾಗಿದೆ ಎಂದ ಸತೀಶ್ ಜಾರಕಿಹೊಳಿ, ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಆರಂಭಿಸಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಒದಗಿಸಲಾಗಿದ್ದು, ಇಡಿ ಅಧಿಕಾರಿಗಳು ಕೇಳಿದರೂ ಅಗತ್ಯ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದರು.
ತಮ್ಮ ಮೇಲಿನ ಆರೋಪಗಳ ಕುರಿತು ಪ್ರತಿಕ್ರಿಯಿಸುತ್ತಾ, "ನಾನು ಎಲ್ಲಿಯೂ ಜಾತಿ ವಿಚಾರ ತಂದು ನನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ. ತಪ್ಪು ಮಾಡಿದರೆ ಜಾತಿಗೆ ಜೋತುಬಿದ್ದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಇದನ್ನು ಸಂಪೂರ್ಣವಾಗಿ ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ" ಎಂದು ಸತೀಶ್ ಜಾರಕಿಹೊಳಿ ದೃಢವಾಗಿ ನುಡಿದರು.




